
ಕಂಡೇವು ನಂದಿನಿ ನದಿಗೆ ಕಲುಷಿತ ನೀರು-ಪರಿಶೀಲಿಸಿ ಅಗತ್ಯ ಕ್ರಮ
ಮಂಗಳೂರು: ಇತಿಹಾಸ ಪ್ರಸಿದ್ಧ ಖಂಡೇವು ನಂದಿನಿ ನದಿಗೆ ಸಮೀಪದ ಮೆಡಿಕಲ್ ಕಾಲೇಜು ಹಾಗೂ ಪಾಲಿಕೆಯ ಚೇಳ್ಯಾರು ತ್ಯಾಜ್ಯ ಘಟಕ (ಎಸ್‌ಟಿಪಿ)ದಿಂದ ಕೊಳಚೆ ನೀರು ಸೇರುತ್ತಿದ್ದು, ಈ ಬಗ್ಗೆ ಸಾಕಷ್ಟುಪ್ರತಿಭಟನೆ ನಡೆದಿದೆ. 2016ರಿಂದ ಐದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ನೀವಾದರೂ ಪರಿಹಾರ ಒದಗಿಸಿ ಎಂದು ನಾಮ ನಿರ್ದೇಶಿತ ಸದಸ್ಯ ರಾಜೀವ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ದಿಶಾ ಸಭೆಯಲ್ಲಿ ಅವರು ಈ ಕುರಿತು ಮಾತನಾಡಿ, ಶಾಸಕ ಉಮಾನಾಥ ಕೋಟ್ಯಾನ್ ಅವರು ದನಿಗೂಡಿಸಿ, ಪರಿಸರ ನಿಯಂತ್ರಣ ಮಂಡಳಿಯವರು ಕೇವಲ ನೋಟೀಸು ನೀಡುತ್ತಾರೆ ಆದರೆ ಅಲ್ಲಿನ ಶ್ರೀನಿವಾಸ ಮೆಡಿಕಲ್ ಕಾಲೇಜಿನವರು ಕ್ಯಾರೇ ಮಾಡುವುದಿಲ್ಲ. ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಆ ಕಾಲೇಜಿನವರ ಮೇಲೆ ಶಿಸ್ತು ಕ್ರಮ ವಹಿಸಬೇಕು. ಇಲ್ಲವಾದರೆ, ಅದನ್ನು ಮುಚ್ಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ಮುಂಚೂರಿನಲ್ಲಿರುವ ಪಾಲಿಕೆಯ ಹಳೆ ಎಸ್‌ಟಿಪಿಯಲ್ಲಿ ವಿದ್ಯುತ್ ಸಮಸೆಯ ಇತ್ತು. ಇದೀಗ 500 ಕೆವಿಯ ಹೊಸ ಟೆಂಡರ್ ಹಾಕಲು ಟೆಂಡರ್ ಆಗಿದೆ. ಅಲ್ಲಿ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ. ಹೊಸ ಎಸ್‌ಟಿಪಿ ಮಾಡಲು 100 ಕೋಟಿ ರೂ.ಗಳ ಅಗತ್ಯವಿದೆ ಎಂದರು.
ಹಿಂದಿನ ಜಿಲ್ಲಾಧಿಕಾರಿಗಳು ಈಗಾಗಲೇ ಅಲ್ಲಿನ ಸಮಸ್ಯೆ ಪರಿಶೀಲಿಸಿ ಅದಕ್ಕೆ ತಕ್ಕುದಾಗಿ ನಿರ್ಣಯ ಕೈಗೊಂಡಿರುತ್ತಾರೆ. ಆ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ಅಗತ್ಯ ವಿದ್ದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಮಂಗಳೂರಿಗೆ ಶೀಘ್ರವೇ ಬರಲಿದೆ ಟಿ55 ಟ್ಯಾಂಕರ್:
ಸುಮಾರು 70 ಟನ್‌ಗಳ ಟಿ೫೫ ಮಿಲಿಟರಿ ಟ್ಯಾಂಕರ್ ಮಂಗಳೂರಿಗೆ ಪುಣೆಯಿಂದ ಶೀಘ್ರವೇ ಬರಲಿದ್ದು, ಇಲ್ಲಿ ಅದರ ಪ್ರದರ್ಶನ ನಡೆಯಲಿದೆ. ಸಕ್ರ್ಯೂಟ್ ಹೌಸ್ ಬಳಿಯ ಯೋಧರ ಸ್ಮಾರಕದ ಬಳಿ ಇದನ್ನು ಪ್ರದರ್ಶನಕ್ಕೆ ಇರಿಸಲು ನಿರ್ಧರಿಸಲಾಗಿದೆ. ಪುಣೆಯಿಂದ ಇಲ್ಲಿಗೆ ತರಿಸಲು ಸುಮಾರು 1.5 ಲಕ್ಷ ರೂ. ವೆಚ್ಚವಾಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸಭೆಯಲ್ಲಿ ತಿಳಿಸಿದರು.