
ಏಕಾದಶಿಯಂದು ಆಶ್ಲೇಷ ಪೂಜೆಗೆ ಆನ್‌ಲೈನ್ ಟಿಕೇಟ್: ಗೊಂದಲ
Monday, July 7, 2025
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸಲಾಗುವ ಆಶ್ಲೇಷ ಪೂಜೆಗೆ ಏಕಾದಶಿಯಂದು ಆನ್‌ಲೈನ್‌ನಲ್ಲಿ ನೊಂದಾಯಿಸಲು ಅವಕಾಶ ನೀಡಿದ್ದು ಗೊಂದಲಕ್ಕೆ ಕಾರಣವಾದ ಘಟನೆ ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏಕಾದಶಿಯಂದು ಯಾವುದೇ ಸೇವೆಗಳನ್ನು ನಡೆಸಲಾಗುವುದಿಲ್ಲ. ಆದರೆ ರವಿವಾರ ಏಕಾದಶಿಯಾಗಿದ್ದರೂ ಆನ್‌ಲೈನ್‌ನಲ್ಲಿ ಆಶ್ಲೇಷ ಪೂಜೆಗೆ ಬುಕ್ಕಿಂಗ್ ಮಾಡಲು ಅವಕಾಶ ತೆರೆದಿತ್ತು. ಇದರಿಂದ ಸುಮಾರು 70ಕ್ಕೂ ಅಧಿಕ ಭಕ್ತರು ಬುಕ್ಕಿಂಗ್ ಮಾಡಿದ್ದರು. ಬುಕ್ಕಿಂಗ್ ಮಾಡಿದವರಲ್ಲಿ ಕ್ಷೇತ್ರಕ್ಕೆ ಆಗಮಿಸಿದ ವೇಳೆ ಪೂಜೆ ಇಲ್ಲದೇ ಗೊಂದಲಕ್ಕೀಡಾಗಿದ್ದು, ಅಧಿಕಾರಿಗಳ ಜೊತೆ ಅಸಮಾಧಾನ ಹೊರಹಾಕಿದ್ದು, ಅಧಿಕಾರಿಗಳು ಅವರನ್ನು ಸಮಾಧಾನ ಪಡಿಸಿದ್ದಾರೆ. ಏಕಾದಶಿಯಂದು ಆಶ್ಲೇಷ ಪೂಜೆಯ ಬುಕ್ಕಿಂಗ್ ತೆರೆದಿರುವುದು ಗಮನಕ್ಕೆ ಬಾರದೇ ಈ ರೀತಿ ಗೊಂದಲ ಉಂಟಾಗಿದೆ ಎನ್ನಲಾಗಿದೆ.
ಪೂಜೆಗೆ ಬಂದವರಲ್ಲಿ ಕೆಲವರು ಪ್ರಾರ್ಥನೆ ಸಲ್ಲಿಸಿದ್ದು ತೆರಳಿದ್ದಾರೆ. ದೇವಸ್ಥಾನದ ಕಡೆಯಿಂದ ತಪ್ಪಾಗಿದ್ದರಿಂದ ಬುಕ್ಕಿಂಗ್ ಮಾಡಿ ಪೂಜೆಗೆಂದು ಬಂದವರಿಗೆ ಸೋಮವಾರ ಆಶ್ಲೇಷ ಪೂಜೆ ನೆರವೇರಿಸಲು ದೇವಸ್ಥಾನದಿಂದಲೇ ವಸತಿ ವ್ಯವಸ್ಥೆ ಮಾಡುವ ಭರವಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.