
ಸಮಾಜಕ್ಕಾಗಿ ದುಡಿಯುವ ತುಡಿತ ಇದ್ದವರಿಗೆ ರೋಟರಿ ಉತ್ತಮ ವೇದಿಕೆ: ಕೇಶವ ಹೆಚ್.ಆರ್.
ಸುಳ್ಯ: ಸಮಾಜಕ್ಕೆ ದುಡಿಯಬೇಕು ಎಂಬ ತುಡಿತ ಇದ್ದವರಿಗೆ ರೋಟರಿ ಕ್ಲಬ್ ಅತ್ಯುತ್ತಮ ವೇದಿಕೆ. ಅದೆಷ್ಟೋ ಮಂದಿ ಹಿರಿಯರ ಸೇವಾ ಮನೋಭಾವದಿಂದ ರೋಟರಿ ಸಂಸ್ಥೆ ಗಟ್ಟಿಯಾಗಿ ಬೆಳೆದಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೇಶವ ಹೆಚ್.ಆರ್. ಹೇಳಿದರು.
ರಥಬೀದಿಯ ರೋಟರಿ ಸಮುದಾಯ ಭವನದಲ್ಲಿ ನಡೆದ ಸುಳ್ಯ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ರೋಟರಿ ಸದಸ್ಯರು ಮನುಕುಲದ ಉದ್ಧಾರಕ್ಕೆ ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ, ಗುರಿ ಮುಟ್ಟುವ ತನಕ ಹೋರಾಟ ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟರು.
ನೂತನ ಅಧ್ಯಕ್ಷ ಡಾ. ರಾಮ್‌ಮೋಹನ್, ಕಾರ್ಯದರ್ಶಿ ಭಾಸ್ಕರನ್ ನಾಯರ್. ಎಂ.ಆರ್., ಖಜಾಂಜಿ ಬಿ.ಟಿ. ಮಾಧವ ಅವರ ನೇತೃತ್ವದ ತಂಡ ಅಧಿಕಾರ ವಹಿಸಿಕೊಂಡರು.
ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ. ಪದಗ್ರಹಣ ನೆರವೇರಿಸಿದರು. ಅತಿಥಿಗಳಾಗಿ ವಲಯ ೫ರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್, ವಲಯ ೫ರ ಝೋನಲ್ ಲೆಪ್ಟಿನೆಂಟ್ ಡಾ. ಪುರುಷೋತ್ತಮ ಕೆ.ಜಿ. ಭಾಗವಹಿಸಿದ್ದರು.
ರೋಟರಿ ಕ್ಲಬ್‌ನ ನಿರ್ಗಮನ ಅಧ್ಯಕ್ಷೆ ಯೋಗಿತಾ ಗೋಪಿನಾಥ್, ಕಾರ್ಯದರ್ಶಿ ಭಾಸ್ಕರನ್ ನಾಯರ್ ಎಂ.ಆರ್, ಕೋಶಾಧಿಕಾರಿ ಮಾಧವ ಬಿ.ಟಿ. ಡಾ. ಪಲ್ಲವಿ ಉಪಸ್ಥಿತರಿದ್ದರು.
ಯೋಗಿತಾ ಗೋಪಿನಾಥ್ ಸ್ವಾಗತಿಸಿ, ನಿರ್ಗಮನ ಕಾರ್ಯದರ್ಶಿ ಡಾ. ಹರ್ಷಿತಾ ಪುರುಷೋತ್ತಮ ವರದಿ ವಾಚಿಸಿದರು, ಕಾರ್ಯದರ್ಶಿ ಭಾಸ್ಕರನ್ ನಾಯರ್ ಎಂ.ಆರ್. ವಂದಿಸಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ವತಿಯಿಂದ ಸುಳ್ಯ ಅಗ್ನಿಶಾಮಕ ಠಾಣೆಗೆ ಕಳೆ ಕೊಚ್ಚುವ ಯಂತ್ರ ಕೊಡ ಮಾಡಲಾಯಿತು.
ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.