
ಮುದ್ರಾಧಾರಣೆಯಿಂದ ಜೀವನೋತ್ತರದಲ್ಲಿ ಮೋಕ್ಷ ಪ್ರಾಪ್ತಿ: ಸುಬ್ರಹ್ಮಣ್ಯ ಶ್ರೀ
ಉಜಿರೆ: ಮನುಷ್ಯನಾಗಿ ಜೀವಿತಕಾಲದಲ್ಲಿ ಅನೇಕ ದುಷ್ಕರ್ಮಗಳನ್ನು ಮಾಡಿರುತ್ತಾನೆ. ಅವುಗಳ ಪರಿಮಾರ್ಜನೆ, ಪ್ರಾಯಶ್ಚಿತ್ತಕ್ಕಾಗಿ ಮುದ್ರಾಧಾರಣೆ ಮಾಡಲಾಗುತ್ತದೆ. ಅಗ್ನಿಯಲ್ಲಿ ಹವಿಸ್ಸು ಸುಡುವಂತೆ ಮುದ್ರಾ ಧಾರಣೆಯಿಂದ ನಮ್ಮ ಪಾಪಕರ್ಮಗಳು ಸುಡುತ್ತವೆ. ಮಹಾವಿಷ್ಣುವಿನ ಶಂಖ, ಚಕ್ರ ಮುದ್ರೆಗಳನ್ನು ಸುದರ್ಶನ ಹವನದಲ್ಲಿ ಕಾಯಿಸಿ, ತೋಳುಗಳಿಗೆ ಚಿಹ್ನೆಧಾರಣೆ ಮಾಡುವುದರಿಂದ ಜೀವನೋತ್ತರದಲ್ಲಿ ಮೋಕ್ಷ ಪ್ರಾಪ್ತಿಯಾಗುವುದೆಂಬ ಐತಿಹ್ಯವಿದೆ. ಭಕ್ತಾದಿಗಳು ಶ್ರದ್ಧೆಯಿಂದ ಮುದ್ರಾಧಾರಣೆ ಹಾಕಿಸಿಕೊಳ್ಳುವುದರಿಂದ ಸಂತೋಷವಾಗಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ನುಡಿದರು.
ಅವರು ಜು.6 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನ ಹಾಗೂ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ ವತಿಯಿಂದ ಆಷಾಢ ಪ್ರಥಮೈಕಾದಶೀ ಪ್ರಯುಕ್ತ ವೇ.ಮೂ. ಶ್ರೀಪತಿ ಎಳಚಿತ್ತಾಯರ ಪೌರೋಹಿತ್ಯ ಹಾಗೂ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ನಡೆದ ತಪ್ತಮುದ್ರಾಧಾರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಸುಮಾರು 500ಕ್ಕೂ ಮಿಕ್ಕಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಮುದ್ರಾಧಾರಣೆ ನಡೆಸಿ ಅದರ ಮಹತ್ವದ ಕುರಿತು ಮಾತನಾಡಿದರು.
ತಾಲೂಕು ತುಳು ಶಿವಳ್ಳಿ ಸಭಾದ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್ಯ, ವೇ.ಮೂ. ರಾಘವೇಂದ್ರ ಭಟ್ ಮದ್ದಡ್ಕ ಸಹಕರಿಸಿದ್ದರು. ಭಕ್ತಾದಿಗಳು ಸರತಿಯ ಸಾಲಿನಲ್ಲಿ ಬಂದು ಶ್ರೀಗಳವರಿಂದ ಮುದ್ರಾಧಾರಣೆ ಹಾಕಿಸಿಕೊಂಡು ತೀರ್ಥ ಸ್ವೀಕರಿಸಿದರು. ಭಾನುವಾರದ ಕಾರಣದಿಂದ ಶಾಲೆ, ಕಾಲೇಜು ಶಿಕ್ಷಕರು ಹಾಗೂ ಮಕ್ಕಳಿಗೆ ಮುದ್ರಾಧಾರಣೆಗೆ ಅನುಕೂಲವಾಗಿತ್ತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ವಿಜಯಗೋಪುರ ಸುಂದರವಾಗಿ ನಿರ್ಮಾಣಗೊಳ್ಳುತ್ತಿರುವುದು ಸಂತೋಷಕರ. ಅವರ ಸಂಕಲ್ಪಕ್ಕನುಗುಣವಾಗಿ ಪರಿಪೂರ್ಣಗೊಂಡು ಬ್ರಹ್ಮಕಲಶೋತ್ಸವ ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸುವುದಾಗಿ ಶ್ರೀಗಳವರು ತಿಳಿಸಿದರು.
ಚಾತುರ್ಮಾಸ್ಯ ವೃತಾಚರಣೆ:
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ತಮ್ಮ ವಿಶ್ವಾವಸು ಸಂವತ್ಸರದ 28ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆಯನ್ನು ಸುಬ್ರಹ್ಮಣ್ಯ ಮೂಲಮಠದಲ್ಲಿ ಜು.20ರಿಂದ ಮೊದಲ್ಗೊಂಡು ಸೆ.7 ರ ವರೆಗೆ ನಡೆಸಲಿದ್ದು ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಪ್ರವಚನ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಗವದ್ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ, ಕೃತಾರ್ಥರಾಗುವಂತೆ ಶ್ರೀಗಳವರು ತಿಳಿಸಿದರು.