
ನವೋದಯದ ಸಾಲ ಮರುಪಾವತಿಯಲ್ಲಿ ಶೇ.98.5 ದಾಖಲೆ
ಕಾರ್ಕಳ: ನವೋದಯದ ಸಾಲ ಮರುಪಾವತಿಯಲ್ಲಿ ಶೇ.98.5 ದಾಖಲೆ ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಶೇ.100ರಷ್ಟು ಸಾಲ ಮರುಪಾವತಿಗೆ ಸಂಘದ ಪ್ರೇರಕರು ಪ್ರಯತ್ನಿಸಬೇಕಾಗಿದೆ ಎಂದು ನವೋದಯ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಬಾಹುಬಲಿ ಪ್ರವಚನ ಮಂದಿರದಲ್ಲಿ ಶನಿವಾರ ನಡೆದ ನವೋದಯ ಸ್ವಸಹಾಯ ಸಂಘದ ಪ್ರೇರಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಸ್ವಸಹಾಯ ಸಂಘಗಳನ್ನು ರಚಿಸುವಂತೆ ಹೊರ ಜಿಲ್ಲೆಗಳಿಂದಲೂ ಬೇಡಿಕೆ ಬರುತ್ತಿದ್ದು, ಈ ಬಗ್ಗೆ ಆತುರದ ನಿರ್ಣಯವನ್ನು ನಾವು ಕೈಗೊಳ್ಳುವುದಿಲ್ಲ. ಮೊದಲನೇಯದಾಗಿ ದಾವಣಗೆರೆ ಜಿಲ್ಲೆಯಲ್ಲಿ ಬಾಕಿಯಿರುವ ತಾಲೂಕಿನಲ್ಲಿ ಈ ಸಂಘವನ್ನು ಆರಂಭಿಸುವ ಕೆಲಸ ಮಾಡುತ್ತೇವೆ. ಶಿವಮೊಗ್ಗದಲ್ಲಿ ಪೂರ್ತಿ ಸಂಘವನ್ನು ಸ್ಥಾಪಿಸುವ ಜತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ಕಾರ್ಯ ನಡೆಸಲಿದ್ದೇವೆ. ಇತ್ತೀಚೆಗೆ ಮೈಸೂರು ಜಿಲ್ಲೆಯಿಂದಲೂ ಹೆಚ್ಚಿನ ಬೇಡಿಕೆ ಬಂದಿದ್ದು, ಆ ಭಾಗಗಳಲ್ಲಿ ಸರ್ವೇ ನಡೆಸುವ ಮೂಲಕ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಹೇಳಿದಂತೆ, ಅವರ ವೇತನ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಿದ್ದೇವೆ ಎಂದ ಅಚರು ನವೋದಯ ಸದಸ್ಯರು ಮೃತಪಟ್ಟ ಸಂದರ್ಭಗಳಲ್ಲಿ ಸಾಲ ಮರುಪಾವತಿಗೆ ವಿಮೆ ಹಾಗೂ ಅನಾರೋಗ್ಯ ಸಂದರ್ಭವೂ ಈ ವಿಮೆ ನೆರವಾಗುವಂತೆ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ನವೋದಯ ಸಮಾವೇಶ ನಡೆಸುವ ಯೋಜನೆ ನಮ್ಮ ಮುಂದಿದೆ ಎಂದರು.
ನವೋದಯ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಭಾಸ್ಕರ ಎಸ್. ಕೋಟ್ಯಾನ್, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್,
ನವೋದಯ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಮೇಘರಾಜ್ ಜೈನ್, ಎಸ್‌ಡಿಸಿಸಿ ಬ್ಯಾಂಕಿನ ನೋಡಲ್ ಅಧಿಕಾರಿ ಪದ್ಮನಾಭ ಹಾಗೂ ಪೂರ್ಣಿಮ ಉಪಸ್ಥಿತರಿದ್ದರು.