
ಏಕಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಿಸಲು ಉಜಿರೆ ಗ್ರಾ.ಪಂ. ಆದ್ಯತೆ: ಉಷಾಕಿರಣ್ ಕಾರಂತ್
ಉಜಿರೆ: ಆತ್ಮನಿರ್ಭರದಡಿ ಉಜಿರೆ ಗ್ರಾ.ಪಂ. ದೇಶದಲ್ಲೇ ನಾಲ್ಕನೇ ಸ್ಥಾನವಿದೆ ಎನ್ನುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಉಜಿರೆ ಗ್ರಾ.ಪಂ. ಜಿಲ್ಲೆಯಲ್ಲೇ ಅತೀದೊಡ್ಡ ಗ್ರಾ.ಪಂ. ಆಗಿದ್ದು 32 ಸದಸ್ಯರನ್ನು ಹೊಂದಿದ್ದು, ಸ್ವಚ್ಛತೆ, ಗ್ರಾಮದ ಅಭಿವೃದ್ಧಿಯಲ್ಲಿ ತಾಲೂಕಿನಲ್ಲಿ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅಧ್ಯಕ್ಷೆ ಉಷಾಕಿರಣ್ ಕಾರಂತ್ ತಿಳಿಸಿದರು.
ಉಜಿರೆ ಗ್ರಾಮ ಪಂಚಾಯತಿನ 2025-26ನೇ ಸಾಲಿನ ಮೊದಲ ಹಂತದ ಗ್ರಾಮ ಸಭೆಯು ಜು.8 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆದ ಉಜಿರೆ ಗ್ರಾ.ಪಂ. ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾ.ಪಂ.ನಿಂದ ಆರ್ಥಿಕ ಹಿಂದುಳಿದ ವರ್ಗಕ್ಕೆ ಪೂರಕ ಸ್ಪಂದನೆ ಒದಗಿಸಿದ್ದೇವೆ. ಪ್ರಸಕ್ತ ಮಳೆಗಾಲದಲ್ಲಿ ತೀವ್ರ ಹಾನಿಯಾಗಿದ್ದು, ಇದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿದ್ದೇವೆ. ಉಜಿರೆ ಗ್ರಾ.ಪಂ.ನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸುವಲ್ಲಿ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ 75 ನಿವೇಶನಗಳು ವಸತಿ ರಹಿತವಾಗಿದೆ. ಅವುಗಳಿಗೆ ಸೂಕ್ತ ದಾಖಲೆ ಒದಗಿಸುವಲ್ಲಿ ರಾಜ್ಯ ಸರಕಾರ ಒಲವು ತೋರದೇ ಇರುವುದಕ್ಕೆ ವಿಷಾಧಿಸುತ್ತೇನೆ ಎಂದರು.
ರಾಜ್ಯಮಟ್ಟದ ತ್ರೋಬಾಲ್‌ನಲ್ಲಿ ವಿಶೇಷ ಸಾಧನೆಗೈದ ಉದಿತ್ ರೈ, ವಿಲೋನಾ ಡಿಕುನ್ಹ ಅವರನ್ನು ಸಮ್ಮಾನಿಸಲಾಗುವುದು ಎಂದರು.
ಕಳೆದ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗ್ರಾಮದ ಮನಸ್ವಿನಿ ಅವರನ್ನು ಸಮ್ಮಾನಿಸಲಾಯಿತು.
ಹೆದ್ದಾರಿಯಲ್ಲಿ ಅಪಾಯಕಾರಿ ತೆರೆದ ಚರಂಡಿ:
ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ರಸ್ತೆ ಅಗಲೀಕರಣಗೊಳಿಸಿರುವುದು ಸಂತೋಷ. ಆದರೆ ನೀರು ಹೋಗಲು ಮಾಡಿರುವ ಚರಂಡಿ ಅಲ್ಲಲ್ಲಿ ಕುಸಿತಗೊಂಡಿದೆ. ಚರಂಡಿ ಮುಚ್ಚುವ ಬದಲಾಗಿ ಅನೇಕ ಕಡೆ ಅರ್ಧಂಬರ್ಧ ತೆರೆದುಕೊಂಡಿದೆ. ಇದಕ್ಕೆ ಯಾರು ಹೊಣೆ. ಗ್ರಾ.ಪಂ. ಜವಾಬ್ದಾರರಲ್ಲ, ಎಂಜಿನಿಯರ್ ಅವರು ಸಭೆಗೆ ಬರೋದಿಲ್ಲ, ಹಾಗಾದರೆ ಮಕ್ಕಳು ಕೊಚ್ಚಿಕೊಂಡು ಹೋದರೆ ಪೋಷಕರು ಹೊಣೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಪ್ರವೀಣ್ ಫೆರ್ನಾಂಡಿಸ್ ಮಾತನಾಡಿ ನಾನು ರಸ್ತೆ ಅವ್ಯವಸ್ಥೆ ಬಗ್ಗೆ ಹೋರಾಟ ಮಾಡಿರುವುದಕ್ಕೆ ಮೂರು ಪ್ರಕರಣ ದಾಖಲಾಗಿದೆ. ಹಿಂದಿನ ಗುತ್ತಿಗೆದಾರರು ಮಾಡಿದ ಅವೈಜ್ಞಾನಿಕ ಕಾಮಗಾರಿಯಿಂದ ಚರಂಡಿಯಲ್ಲಿ ಮಣ್ಣು ತುಂಬಿಹೋಗಿದೆ. ಇದಕ್ಕೆ ಯಾರು ಹೊಣೆ. ಗ್ರಾಮ ಸಭೆಗೆ ಇಲಾಖಾ ಮೇಲಾಧಿಕಾರಿಗಳು ಬರಬೇಕು. ಗ್ರಾ.ಪಂ. ವತಿಯಿಂದ ಹೆದ್ದಾರಿ ಇಲಾಖೆಗೆ ಆ ಬಗ್ಗೆ ನೋಟಿಸ್ ಕಳುಹಿಸುತ್ತೇವೆ ಎಂದರು.
ಉಜಿರೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಲೆಕ್ಕ ಭರ್ತಿಗೆ ಮಾತ್ರ ಎಂಬಂತಾಗಿದೆ. ಶಾಶ್ವತ ವೈದ್ಯರಿಲ್ಲ. ವೈದ್ಯರಿಗಾಗಿ ಬೆಳ್ತಂಗಡಿಗೆ ತೆರಳಬೇಕು. ಹಾಗಿದ್ದಮೇಲೆ ಸರಕಾರಿ ಆಸ್ಪತ್ರೆ ಇದ್ದೇನು ಪ್ರಯೋಜನ ಎಂದು ಶ್ರೀಧರ್ ಪ್ರಶ್ನಿಸಿದರು. ಈ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ವಿದ್ಯುತ್ ಕಂಬಗಳಿಗೆ ಹಾನಿ:
ಉಜಿರೆ ಧ್ವಾರದಿಂದ ಕಾಲೇಜು ರಸ್ತೆಯಲ್ಲಿ 146 ಬೀದಿದೀಪಗಳಿವೆ. 77 ಕಂಬ ಉರಿಯುತ್ತಿದೆ. 69 ಕಂಬ ಉರಿಯುತ್ತಿಲ್ಲ. 4 ಕಂಬ ಆಕ್ಸಿಡೆಂಟ್‌ನಿಂದ ಹಾನಿಯಾಗಿದೆ. ಶೀಘ್ರವೇ ಸರಿ ಪಡಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಅದಕ್ಕೆ ಪಿಡಿಒ ಪ್ರತಿಕ್ರಿಯಿಸಿ ಇವುಗಳಲ್ಲಿ 74 ಬೀದಿದೀಪ ಜಾಹಿರಾತು ಅಳವಡಿಸಲು ಏಲಂ ಆಗಿದೆ. ಬಳಿಕ ಗ್ರಾ.ಪಂ. ನಿರ್ವಹಣೆ ನಡೆಸಲಿದೆ. ಪ್ರತಿ ವಿದ್ಯುತ್ ಕಂಬಗಳಿಗೆ 1.50 ಲಕ್ಷ ರೂ. ಬೇಕು. ಅಧಿಕ ಮಳೆಗೆ ಬೀದಿದೀಪಗಳು ಹಾಳಾಗುತ್ತಿವೆ. ಮಳೆಗಾಲ ಬಳಿಕ ಸೂಕ್ತ ನಿರ್ವಹಣೆ ಮಾಡಲಾಗುವುದು ಎಂದರು. ಈ ವಿಚಾರವಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಪ್ರತಿಕ್ರಿಯಿಸಿ ಶಾಸಕರ ಅನುದಾನದಡಿ ಇದರ ನಿರ್ವಹಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.