
‘ಮಂಗಳೂರು ಜಿಲ್ಲೆ’ ಮರುನಾಮಕರಣ ಪ್ರಸ್ತಾವ ದಿಶಾ ಸಭೆಯಲ್ಲಿ ನಿರ್ಣಯ: ಸರಕಾರಕ್ಕೆ ಸಲ್ಲಿಕೆ
ಮಂಗಳೂರು: ದಕ್ಷಿಣ ಕನ್ನಡವನ್ನು ‘ಮಂಗಳೂರು ಜಿಲ್ಲೆ’ಯಾಗಿ ಮರುನಾಮಕರಣಗೊಳಿಸುವ ವಿಷಯ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿಯೂ ಪ್ರಸ್ತಾವಗೊಂಡಿತಲ್ಲದೆ, ಜಿಲ್ಲೆಯ ಶಾಸಕರು, ಸಂಸದರ ಸಮ್ಮತಿಯ ಜಂಟಿ ಪ್ರಸ್ತಾವವನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಲು ನಿರ್ಣಯಿಸಲಾಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ದಿಶಾ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ವಿಷಯ ಪ್ರಸ್ತಾವಿಸಿದರು.
ದ.ಕ. ಜಿಲ್ಲೆಗೆ ಮಂಗಳೂರು ಹೆಸರು ನಾಮಕರಣಗೊಳಿಸುವ ಚರ್ಚೆ ನಡೆಯುತ್ತಿದೆ. ಬೆಂಗಳೂರಿನತಂತೆ ಮಂಗಳೂರು ಕೂಡಾ ಜಾಗತಿಕವಾಗಿ ಗುರುತಿಸಿಕೊಂಡಿದೆ. ಆದ್ದರಿಂದ ದಕ್ಷಿಣ ಕನ್ನಡವನ್ನು ಮಂಗಳೂರು ಜಿಲ್ಲೆಯಾಗಿ ಮರುನಾಮಕರಣಗೊಳಿಸುವ ನಿಣರ್ಯವನ್ನು ಸರಕಾರಕ್ಕೆ ಕಳುಹಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿದ್ದ ಶಾಸಕರು, ಸಂಸದರು ಸರಕಾರಕ್ಕೆ ದಿಶಾ ಸಭೆಯಲ್ಲಿ ಕೈಗೊಂಡ ಜಂಟಿ ಪ್ರಸ್ತಾವದ ನಿರ್ಣಯ ಸಲ್ಲಿಸಲು ನಿರ್ಧರಿಸಿದರು.
ನಿಡಿಗಲ್ ಬಳಿ ಆನೆ ಕ್ಯಾಂಪ್‌ಗೆ ಬೇಡಿಕೆ:
ಸುಳ್ಯದಲ್ಲಿ ಆನೆ ಹಾಗೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಏನು ಕ್ರಮವಾಗಿದೆ ಎಂದು ಶಾಸಕಿ ಭಾಗೀರಥಿ ಮರುಳ್ಯ ಪ್ರಶ್ನಿಸಿದರು.
ಸಂಸದರು ಈ ಬಗ್ಗೆ ಎರಡು ಬಾರಿ ಸಭೆ ನಡೆಸಿದ್ದಾರೆ. ದುಬಾರೆ ಕ್ಯಾಂಪ್‌ನಿಂದ ಆನೆ ತರಿಸಿ ಕನಕಮಜಲುವಿನಲ್ಲಿ ಪ್ರತಿರೋಧ ಚಟುವಟಿಕೆ ನಡೆಯುತ್ತಿದೆ ಎಂದು ಅದಿ ಕಾರಿಗಳು ಮಾಹಿತಿ ನೀಡಿದಾಗ, ಸೋಲಾರ್ ಬೇಲಿ, ಕಂದಕಗಳನ್ನು ನಿರ್ಮಿಸಲು ವಿಶೇಷ ಅನುದಾನ ನೀಡಬೇಕು ಎಂದು ಶಾಸಕಿ ಒತ್ತಾಯಿಸಿದರು.
ನಿಡಿಗಲ್ ಬಳಿ ಆನೆ ಕ್ಯಾಂಪ್ ಆದರೆ, ಆನೆಗಳ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಲಿದೆ. ಜತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ ಎಂದು ಶಾಸಕ ಶಾಸಕ ಹರೀಶ್ ಪೂಂಜಾ ಹೇಳಿದಾಗ, ಅಲ್ಲಿ ಮಂಕಿ ಪಾರ್ಕ್ ಕೂಡಾ ಆಗಲಿ ಎಂದು ಶಾಸಕಿ ಭಾಗೀರಥಿ ದನಿಗೂಡಿಸಿದರು.
ಎಂಎಸ್‌ಇಝೆಡ್‌ನ ಫಿಶ್‌ಮೀಲ್ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಒತ್ತಾಯ:
ಎಂಎಸ್‌ಇಝೆಡ್‌ನ ಒಳಗಡೆ ಕಾರ್ಯಾಚರಿಸುತ್ತಿರುವ ಫಿಸ್‌ಮೀಲ್‌ಗಳ ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಸೇರಿದಂತೆ ಸಾಮಾಜಿಕ ಭದ್ರತೆಯ ಅಗತ್ಯವಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಆಗ್ರಹಿಸಿದರು.
ಎಂಎಸ್‌ಇಝೆಡ್ ಒಳಗೆ ಅಧಿಕಾರಿಗಳು ಹೋಗಬೇಕಾದರೆ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ. ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ತಿಳಿಸಿದಾಗ, ಜಿಲ್ಲೆಯ ಎಲ್ಲ ಫಿಶ್‌ಮೀಲ್‌ಗಳಲ್ಲಿನ ಕಾರ್ಮಿಕರಿಗೆ ನೀಡಲಾಗುತ್ತಿರುವ ಸಾಮಾಜಿಕ ಭದ್ರತಾ ಮಾಹಿತಿಯನ್ನು ಒದಗಿಸುವಂತೆ ಶಾಸಕ ವೇದವ್ಯಾಸ ಕಾಮತ್ ಸಂಬಂಧಪಟ್ಟ ಅದಿ ಕಾರಿಗಳಿಗೆ ಆಗ್ರಹಿಸಿದರು.
ರಾ.ಹೆ. ರಸ್ತೆಗಳ ಗುಂಡಿ ಮುಚ್ಚಿಸಿ:
ಹೊನ್ನಕಟ್ಟೆ, ಕೂಳೂರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರೀಗಾತ್ರದ ಗುಂಡಿಗಳಾಗಿದ್ದು, ಅವುಗಳನ್ನು ಮುಚ್ಚಿಸುವ ಕಾರ್ಯ ಹೆದ್ದಾರಿ ಇಲಾಖೆಯಿಂದ ಆಗಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಆಗ್ರಹಿಸಿದರು.
ಸಭೆಯ ನಾಮನಿರ್ದೇಶಿತ ಸದಸ್ಯರಾದ ರಾಜೀವ್ ಶೆಟ್ಟಿಯವರು ಮಾತನಾಡಿ, ಕೂಳೂರು, ಸುರತ್ಕಲ್, ಪಣಂಬೂರು, ಅಡ್ಯಾರ್ ಮೊದಲಾದ ಪ್ರದೇಶಗಳಲ್ಲಿ ಹೆದ್ದಾರಿ ಬದಿ ಗಳಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ, ಅಂಗಡಿಗಳು, ತ್ಯಾಜ್ಯ ಎಸೆಯುವುದು ನಡೆಯುತ್ತಿದೆ ಎಂದು ಆರೋಪಿಸಿದಾಗ ಶಾಸಕ ಉಮಾನಾಥ ಕೋಟ್ಯಾನ್ ದನಿಗೂಡಿಸಿ, ಹೆದ್ದಾರಿ ಇಲಾಖೆಯವರು ಆರಂಭದಲ್ಲಿಯೇ ಇದಕ್ಕೆ ಅವಕಾಶ ನೀಡದಿದ್ದರೆ ಯಾವುದೇ ಸಮಸ್ಯೆ ಆಗುವುದಿಲ ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟವರು, ರಾ.ಹೆದ್ದಾರಿ ರಸ್ತೆಗಳಲ್ಲಿನ ಅತಿಕ್ರಮಣ ತೆರವುಗೊಳಿಸುವ ಬಗ್ಗೆ ಕ್ರಮ ವಹಿಸುವಂತೆ ರಾ. ಹೆದ್ದಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕೆತ್ತಿಕಲ್ ತಡೆಗೋಡೆ ಅವೈಜ್ಞಾನಿಕ:
ಕೆತ್ತಿಕಲ್‌ನಲ್ಲಿ ನಿರ್ಮಾಣವಾದ ತಡೆಗೋಡೆ ಅವೈಜ್ಞಾನಿಕವಾಗಿದ್ದು, ಮೊದಲಿಗಿಂತಲೂ ಈ ಬಾರಿ ಹೆಚ್ಚು ಭೂಕುಸಿತವಾಗಿದೆ. ಅಲ್ಲಲ್ಲಿ ಮಾಡಲಾಗಿರುವ ನೀರು ಹರಿದುಹೋಗುವ ಒಳಚರಂಡಿಗಳಿಂದ ಅಲ್ಲಿನ ಕೆಳಭಾಗದ ಮನೆ, ದೇವಸ್ಥಾನಕ್ಕೆ ನೀರು ಹರಿಯುತ್ತಿದೆ ಎಂದು ನಾಮನಿರ್ದೇಶಿತ ಸದಸ್ಯ ರಾಜೀವ್ ಶೆಟ್ಟಿ ಆಕ್ಷೇಪಿಸಿದರು.
ಕೆತ್ತಿಕಲ್‌ನ ಸಮಸ್ಯೆ ಕುರಿತಂತೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯನಿಕ್ಸ್ (ಎನ್‌ಐಆರ್‌ಎಂ)ನ ತಜ್ಞರು ಪರಿಶೀಲನೆ ನಡೆಸಿದ್ದು, ಅವರ ಸೂಚನೆಯಂತೆ ಎನ್‌ಎಚ್‌ಎಐ ಇಳಿಜಾರು ಸ್ಥಿರೀಕರಣ ಮತ್ತು ರಕ್ಷಣಾ ಕಾರ್ಯ ಆರಂಭಿಸಲಾಗಿದೆ ಎಂದು ರಾ.ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಭೆಗೆ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಜಿಪಂ ಸಿಇಒ ಡಾ. ಆನಂದ್, ಎಸ್ಪಿ ಡಾ. ಅರುಣ್, ಅರಣ್ಯ ಉಪ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ, ನಾಮ ನಿರ್ದೇಶಿತ ಸದಸ್ಯರಾದ ಪೂರ್ಣಿಮಾ, ದಯಾನಂದ ಚೇಳ್ಯಾರು, ಅಮೃತ್‌ಲಾಲ್ ಜಾಯ್ಸ್ ಡಿಸೋಜಾ, ಭರತ್ ಕುಮಾರ್, ಸಂತೋಷ್ ಕುಮಾರ್ ರಾಯಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.