
ಬಂಟ್ವಾಳ ತಾಲೂಕು ಕಚೇರಿಗೆ ಲೋಕಾಯುಕ್ತ ದಾಳಿ: ಉಪತಹಶೀಲ್ದಾರ್ ಸಹಿತ ಮೂವರು ವಶಕ್ಕೆ
Wednesday, August 13, 2025
ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ಆಡಳಿತಸೌಧ (ತಾಲೂಕು) ಕಚೇರಿಗೆ ಬುಧವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಮಧ್ಯವರ್ತಿಯ ಮೂಲಕ ಹಣದ ವ್ಯವಹಾರದಲ್ಲಿ ತೊಡಗಿದ್ದ ಉಪತಹಶೀಲ್ದಾರ್ ಸಹಿತ ಮೂವರನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದ ಘಟನೆ ನಡೆದಿದೆ.
ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಹಾಗೂ ಮಧ್ಯವರ್ತಿ ವಾಮದಪದವು ನಿವಾಸಿ ಗಣೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ತಹಶೀಲ್ದಾರ್ ಪಾತ್ರ ಇದೆಯೇ ಎಂಬುದರ ಬಗ್ಗೆಯು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸಜೀಪಮುನ್ನೂರಿನ ಪುಷ್ಪರಾಜ್ ಅವರ ದೂರಿನ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಕಾರ್ಯಾಚರಣೆ ನಡೆಸಿದ್ದು, ಬಿ.ಸಿ.ರೋಡಿನ ದೇವಸ್ಥಾನವೊಂದರ ಬಳಿ ಮಧ್ಯವರ್ತಿಯ ಮೂಲಕ ಹಣ ವ್ಯವಹಾರ ನಡೆಯುವ ಸಂದರ್ಭದಲ್ಲಿ ಪ್ರಕರಣವನ್ನು ಬೇಧಿಸುವಲ್ಲಿ ಲೋಕಾಯಕ್ತ ಪೊಲೀಸರು ಯಶಸ್ವಿಯಾಗಿದ್ದಾರೆ.
ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಡಿವೈಎಸ್ಪಿಗಳಾದ ಗಾನಾ ಪಿ. ಕುಮಾರ್, ಸುರೇಶ್ ಕುಮಾರ್, ಇನ್ಸ್‌ಪೆಕ್ಟರ್ ಚಂದ್ರಶೇಖರ, ಭಾರತಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಕುರಿತು ಹೆಚ್ಚಿನ ಮಾಹಿತಿ ಲೋಕಾಯುಕ್ತ ಅಧಿಕಾರಿಗಳಿಂದ ಇನ್ನಷ್ಟೇ ಲಭ್ಯವಾಗ ಬೇಕಾಗಿದ್ದು, ತನಿಖೆ ಮುಂದುವರಿದಿದೆ.