
ಕೊಲ್ಲೂರು ಸೌಪರ್ಣಿಕಾ ನದಿಗೆ ಬಿದ್ದು ಸಾವನಪ್ಪಿದ ಪ್ರಕರಣಕ್ಕೆ ಹೊಸ ತಿರುವು
ಕುಂದಾಪುರ: ಅಗಸ್ಟ್ 7ರಂದು ಬೆಳಿಗ್ಗೆ ನಟೇಶ್ (36) ಎಂಬವರು ಕೊಲ್ಲೂರಿನ ಸಂಪ್ರೆ ಎಂಬಲ್ಲಿಯ ಸೌಪರ್ಣಿಕಾ ನದಿಯಲ್ಲಿ ಕಾಲು ಜಾರಿ ಬಿದ್ದು ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದರು ಎಂಬುದು ಪ್ರಕರಣ. ನಂತರ ಹುಡುಕಾಡಿದಾಗ ನಟೇಶರವರ ಮೃತ ದೇಹ ಕೊಲ್ಲೂರಿನ ಮಾವಿನಕಾರು ಸೇತುವೆ ಬಳಿ ಬೆಳಗ್ಗೆ 9 ಗಂಟೆಗೆ ನದಿಯಲ್ಲಿ ದೊರೆತಿದ್ದು ಕೊಲ್ಲೂರು ಠಾಣೆಯಲ್ಲಿ ಯುಡಿಆರ್ ರಂತೆ ಪ್ರಕರಣ ದಾಖಲಾಗಿತ್ತು.
ಆದರೆ, ಇದೀಗ ಈ ಪ್ರಕಾರಣಕ್ಕೊಂದು ದೊಡ್ಡ ತಿರುವು ಸಿಕ್ಕಿದ್ದು, ನಟೇಶ್ ರವರು ಕಾಲು ಜಾರಿ ಬಿದ್ದದ್ದಲ್ಲ, ಅದೊಂದು ಆತ್ಮಹತ್ಯೆ ಎಂಬುದು ಪತ್ತೆಯಾಗಿದೆ.
ನಟೇಶ್ ಅವರು ಸೌಪರ್ಣಿಕಾ ನದಿಯ ದಡದಲ್ಲಿ ನಿಲ್ಲಿಸಿದ ಅವರ ಕಾರಿನ ಬೀಗದ ಕೀ ಕಾರಿನಲ್ಲಿಯೇ ಇದ್ದು, ಇದನ್ನು ಅವರ ಮನೆಯ ಬಳಿ ನಿಲ್ಲಿಸಲಾಗಿತ್ತು. ಕಾರಿನ ಒಳಗೆ ನೋಡಿದಾಗ ನಟೇಶ್ ಬಳಸುತ್ತಿದ್ದ ಮೊಬೈಲ್ ಮತ್ತು ಒಂದು ಸಣ್ಣ ಚೀಟಿ ದೊರೆತ್ತಿದ್ದು, ಅದರಲ್ಲಿ ಮೊಬೈಲ್ ಪಾಸ್ ವರ್ಡ್ ಇತ್ತು. ತನ್ನ ಸಾವಿನ ರಹಸ್ಯ ಮೊಬೈಲ್ ಗ್ಯಾಲರಿಯಲ್ಲಿದೆ ಎಂಬಿತ್ಯಾದಿಯಾಗಿ ಬರೆದಿರುವುದು ಕಂಡುಬದಿದೆ. ಮೊಬೈಲ್ ಅನ್ನು ಓಪನ್ ಮಾಡಿ ನೋಡಿದಾಗ ಅದರಲ್ಲಿನ ವಿಡಿಯೋ ತುಣುಕುಗಳಲ್ಲಿ ಸಂತು ಮತ್ತು ನಾಗೇಶ @ ದಳಿ-ನಾಗ ಇವರು ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇತ್ತು. ನಟೇಶ್ ರವರ ಆತ್ಮಹತ್ಯೆಗೆ ಸಂತು ಯಾನೇ ಸಂತೋಷ್ ಮತ್ತು ದಳಿ-ನಾಗ ಇವರೇ ಕಾರಣರಾಗಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.