ಧರ್ಮಸ್ಥಳ ಪ್ರಕರಣ: ಮುಂದುವರೆದ ಶೋಧ ಕಾರ್ಯಾಚರಣೆ-17ನೇ ಸ್ಥಳದಲ್ಲೂ ಏನೂ ಸಿಗಲಿಲ್ಲ
ನೇತ್ರಾವತಿ ನದಿಯ ಬದಿಯಲ್ಲಿರುವ ಕನ್ಯಾಡಿಯ ದ್ವಾರಕಾಶ್ರಮದ ಗೇಟ್‌ನ ಒಳಗೆ ಶೋಧ ಕಾರ್ಯಾಚರಣೆ ನಡೆದಿದೆ. ಖಾಸಗಿ ಜಾಗದ ಗೇಟ್ ದಾಟಿ ಹೋಗಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಸ್ಥಳಕ್ಕೆ ಕರೆಸಿದ ಎಸ್‌ಐಟಿ ಅಧಿಕಾರಿಗಳು ಅವರಿಂದ ಅನುಮತಿ ಪಡೆದುಕೊಂಡು ಒಳಗೆ ಹೋಗಿದ್ದಾರೆ.
ಖಾಸಗಿ ಜಾಗದ ಗೇಟ್ ಗೆ ಹಾಕಿದ್ದು ಬೀಗ ತೆಗೆಯಲು ತೋಟವನ್ನು ನೋಡಿಕೊಳ್ಳುತ್ತಿರುವ ಮ್ಯಾನೇಜರ್ ಬರಬೇಕಾಗಿ ಬಂತು. ಎಸ್.ಐಟಿ ಮೊದಲೇ ಮಾಹಿತಿ ನೀಡಿರದ ಕಾರಣ ತೋಟವನ್ನು ನೋಡಿಕೊಳ್ಳುವವರು ಸ್ಥಳದಲ್ಲಿ ಇರಲಿಲ್ಲ. ಇದರಿಂದಾಗಿ ಅವರು ಬರಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಸ್‌ಐಟಿ ಕಾಯಬೇಕಾಗಿ ಬಂತು. ಬಳಿಕ ಗೇಟ್ ನ ಬೀಗದ ಕೀ ತರಿಸಿ ಗೇಟ್ ಅನ್ನು ತೆರೆದು ಸ್ಥಳಕ್ಕೆ ತೆರಳಲಾಯಿತು.
ಇಲ್ಲಿಗೂ ಬಂದಿದ್ದ ದೂರುದಾರ..
ಎಸ್‌ಐಟಿ ಆರಂಭದಲ್ಲಿ ಸಾಕ್ಷಿ ದೂರುದಾರನೊಂದಿಗೆ ಸ್ಥಳ ಗುರುತಿಸಲು ಬಂದ ವೇಳೆ ಈ ಸ್ಥಳಕ್ಕೆ ಬಂದಿದ್ದರು. ಆದರೆ ಅಂದು ಭಾರೀ ಮಳೆ ಮತ್ತು ಸಂಜೆಯಾದ ಕಾರಣ ಸ್ಥಳ ಗುರುತಿಸುವ ಕಾರ್ಯವನ್ನು ಮಾಡದೆ ಎಸ್‌ಐಟಿ ಹಿಂದಿರುಗಿತ್ತು. ಇದೀಗ ಇದೇ ಸ್ಥಳಕ್ಕೆ ಎಸ್.ಐ.ಟಿ ಅಧಿಕಾರಿಗಳು ಸಾಕ್ಷಿ ದೂರುದಾರನೊಂದಿಗೆ ಆಗಮಿಸಿದ್ದು ಇಲ್ಲಿ ಕಾರ್ಯಾಚರಣೆ ನಡೆಸಿದೆ. ನಿರಂತರ ಮಳೆ ಶೋಧ ಕಾರ್ಯಚರಣೆಗೆ ಅಡ್ಡಿಯಾಯಿತು.
ಹೆಣ ಹೂತಿದ್ದು ನಿಜ..
ಹೆಣ ಹೂತ್ತಿದ್ದು ನಿಜ, ಆದರೆ ಅಸ್ಥಿಪಂಜರ ಸಿಗಲಿಲ್ಲ ಎಂದು ಅನಾಮಿಕ ದೂರುದಾರ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.
ಇಷ್ಟ ವರ್ಷ ಯಾಕೆ ಬರಲಿಲ್ಲ, ಈಗ ಯಾಕೆ ಬಂದಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಆತ, ನನಗೆ ಪಾಪಪ್ರಜ್ಞೆ ಕಾಡುತ್ತಿದ್ದು, ತಲೆಬರುಡೆಗಳು ಕನಸ್ಸಿನಲ್ಲಿ ನನಗೆ ಕಾಣಿಸುತ್ತಿತ್ತು. ಅಲ್ಲದೇ ಸತ್ತವರಿಗೆ ಯಾವುದೇ ಕರ್ಮ ಆಗಿರಲಿಲ್ಲ. ಈಗ ಅವುಗಳನ್ನು ತೆಗೆದು ಕಾರ್ಯಗಳನ್ನು ಮಾಡಿದರೆ ನನಗೆ ಪುಣ್ಯ ಸಿಗಬಹುದು, ಪೂಜೆ ಮಾಡಿಸೋಣಾ ಎಂಬ ಕಾರಣಕ್ಕೆ ಬಂದಿದ್ದೀನಿ ಎಂದಿದ್ದಾನೆ.
ಆಗ ಹೇಗಿತ್ತು, ಈಗ ಹೇಗಿತ್ತು ಪರಿಸ್ಥಿತಿ ಎಂಬ ಪ್ರಶ್ನೆಗೆ, ಆಗ ಕಾಡು ಕಡಿಮೆ ಇತ್ತು, ಆದರೆ ಈಗ ಕಾಡು ಜಾಸ್ತಿ ಇದೆ. ನಾನು ಕೆಲವು ಪ್ರದೇಶಗಳನ್ನು ಸರಿಯಾಗಿ ಗುರಿತಿಸಿದ್ದೇನೆ, ಆದರೆ ಸ್ಥಳದಲ್ಲಿ ಕೆಲವು ಬದಲಾವಣೆ ಆಗಿದೆ. ಆದರೆ ಈಗ ಅಲ್ಲಿ ಸಿಗಲಿಲ್ಲ ಎಂದರೆ ನಾನು ಏನು ಮಾಡಲಾಗುತ್ತದೆ, ನನಗೆ ಗ್ರಾಮ ಪಂಚಾಯಿತಿ ಅವರು ಶವ ಹೂಳಲು ಹೇಳಿಲ್ಲ, ಆದರೆ ಮಾಹಿತಿ ಕಚೇರಿ ಕಡೆಯವರು ಹೇಳುತ್ತಿದ್ದರು. ಆಗ ನಾವು ಅವುಗಳನ್ನು ಹೂಳುತ್ತಿದ್ದೇವು. ನಾನು ಅರಣ್ಯ ಪ್ರದೇಶದಲ್ಲಿ ಮಾತ್ರ ಮಣ್ಣು ಮಾಡುತ್ತಿದ್ದೇವು, ಸ್ಮಶಾನ ಜಾಗದಲ್ಲಿ ಮಾಡುತ್ತಿರಲಿಲ್ಲ. ನಾವು ನೇತ್ರಾವತಿ ಹೊಳೆ ಬದಿಯೇ ಹೂತು ಹಾಕುತ್ತಿದ್ದೇವು ಎಂದಿದ್ದಾನೆ ಎನ್ನಲಾಗಿದೆ.
ಹೇಮಾವತಿ ನಾಪತ್ತೆ..
13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ಸಹೋದರಿ ಹೇಮಾವತಿ ಮತ್ತೆ ಮರಳಿ ಮನೆಗೆ ಬಂದಿಲ್ಲ ಎಂದು ನಿತಿನ್ ಎಂಬವರು ಬೆಳ್ತಂಗಡಿ (ಎಸ್‌ಐಟಿ ಕಚೇರಿಗೆ ದೂರು ನೀಡಿದ್ದಾರೆ. ಸಹೋದರಿ ಜತೆ ಬಂದಿದ್ದ ಮಹಿಳೆ ಮನೆಗೆ ಮರಳಿದ್ದಾರೆ, ಹೇಮಾವತಿ ಬಂದಿಲ್ಲ ಎಂದು ನಿತಿನ್ ಹೇಳಿದ್ದಾರೆ. ಹೇಮಾವತಿ, ಬಂಟ್ವಾಳ ತಾಲೂಕಿನ ಕಾವಲ ಮುಡೂರು ಗ್ರಾಮದ ನಿವಾಸಿಯಾಗಿದ್ದಾರೆ. ಹೇಮಾವತಿ ಕಾಣೆಯಾದ ಸಂದರ್ಭದಲ್ಲಿ ಕುಟುಂಬಸ್ಥರು, ಪುಂಜಾಲು ಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಹೇಳಲಾಗಿದೆ.