ಕಲ್ಲು, ಮರಳು ಅಭಾವ: 18ರಂದು ಕಾರ್ಮಿಕ ಸಂಘಟನೆಗಳ ಬೃಹತ್ ಪ್ರತಿಭಟನೆ
ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಯಾದವ ಶೆಟ್ಟಿ, ಆ. 18ರಂದು ಬೆಳಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಸಿ ಬಳಿಕ ಮಿನಿ ವಿಧಾನಸೌಧ ಎದುರು ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದರು.
ಮರಳು ಮತ್ತು ಕೆಂಪು ಕಲ್ಲಿಗೆ ಕಾನೂನುಬದ್ಧವಾಗಿ ಪರವಾನಗಿ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದರಿಂದ ಜಿಲ್ಲೆಯ 1.20 ಲಕ್ಷಕ್ಕೂ ಅಧಿಕ ನೋಂದಾಯಿತ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಜನಸಾಮಾನ್ಯರು ಮನೆ ಕಟ್ಟಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಮರಳಿನ ಸಂಗ್ರಹ ಸಾಕಷ್ಟಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ಎದುರಾಗಿದೆ. ಪರಿಣಾಮ ಮರಳು ಮತ್ತು ಕೆಂಪುಕಲ್ಲು ಅತ್ಯಂತ ದುಬಾರಿಯಾಗಿದೆ ಎಂದರು.
ಕರಾವಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಬೇಕು, ಪರಿಸಹ ಸ್ನೇಹಿ ಮರಳುಗಾರಿಕೆ ಹಾಗೂ ನಿಯಮಬದ್ಧ ಕೆಂಪು ಕಲ್ಲು ಮತ್ತು ಕಪ್ಪು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು, ಕೈಗೆಟುಕುವ ದರದಲ್ಲಿ ಮರಳು, ಕೆಂಪು ಕಲ್ಲು, ಕಪ್ಪು ಕಲ್ಲು ಮತ್ತು ಜಲ್ಲಿ ಸಿಗುವಂತಾಗಬೇಕು. ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ತೊಂದರೆಗೆ ಒಳಗಾಗಿದ್ದು ಅವರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಮಾಸಿಕ 10 ಸಾವಿರ ರೂ. ನೀಡಬೇಕು. ಕೇರಳದ ಮಾದರಿಯಲ್ಲಿಯೇ ರಾಜಧನ ಪಾವತಿಸುವ ವ್ಯವಸ್ಥೆ ಆಗಬೇಕು ಎಂದವರು ಒತ್ತಾಯಿಸಿದರು.
ಎಐಟಿಯುಸಿ ಉಪಾಧ್ಯಕ್ಷ ಶೇಖರ್ ಬಿ., ಸಿಐಟಿಯು ಕೋಶಾಧಿಕಾರಿ ಯೋಗೀಶ್ ಜಪ್ಪಿನಮೊಗರು, ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರವಿಚಂದ್ರ ಕೊಂಚಾಡಿ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಸುರೇಶ್ ಕುಮಾರ್ ಇದ್ದರು.