
ರಸ್ತೆ ಹೊಂಡಕ್ಕೆ ಬಿದ್ದ ಸ್ಕೂಟರ್ ಸವಾರ: ಬಸ್ಸು ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ
Sunday, August 31, 2025
ಮಂಗಳೂರು: ನಂತೂರು ಬಳಿ ಕಾರನ್ನು ಓವರ್ ಟೇಕ್ ಮಾಡುವ ವೇಳೆ ದ್ವಿಚಕ್ರ ವಾಹನ ಸವಾರನೊಬ್ಬ ರಸ್ತೆ ಹೊಂಡಕ್ಕೆ ಬಿದ್ದಿದ್ದು, ಹಿಂದಿನಿಂದ ಬಂದ ಬಸ್ಸನ್ನು ಚಾಲಕ ಹಠಾತ್ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಬಳಿ ಶನಿವಾರ ರಾತ್ರಿ 8.45ರ ವೇಳೆ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿ ಅಳವಡಿಸಲಾಗಿದ್ದ ಸಿಸಿ ಕೆಮರಾದಲ್ಲಿ ಘಟನೆಯ ಸಂಪೂರ್ಣ ಚಿತ್ರಣ ಸೆರೆಯಾಗಿದೆ. ಎಡಭಾಗದಲ್ಲಿದ್ದ ಸ್ಕೂಟರ್ ಸವಾರ ಕಾರನ್ನು ಹಿಂದಿಕ್ಕುವ ಉದ್ದೇಶದಿಂದ ವೇಗವಾಗಿ ಬಲಕ್ಕೆ ಬಂದಿದ್ದು, ಈ ವೇಳೆ ರಸ್ತೆಯಲ್ಲಿದ್ದ ಗುಂಡಿಗೆ ಸ್ಕೂಟರ್‌ನ ಚಕ್ರಗಳು ಇಳಿದಿದ್ದು, ನಿಯಂತ್ರಣ ತಪ್ಪಿದ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಾನೆ. ಇದೇ ವೇಳೆ ಹಿಂದಿನಿಂದ ಸಿಟಿ ಬಸ್ಸೊಂದು ಬಂದಿದ್ದು, ಅದರ ಚಾಲಕ ಶಶಿಧರ ಶೆಟ್ಟಿ ಅವರು ಸಮಯ ಪ್ರಜ್ಞೆಯಿಂದ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ್ದಾರೆ. ಇದರಿಂದ ಕೆಲವೇ ಸೆಕೆಂಡುಗಳ ಅಂತರದಲ್ಲಿ ಸವಾರ ಬದುಕುಳಿದಿದ್ದಾನೆ.
ಸ್ಕೂಟರ್ ಸವಾರ ಸಣ್ಣಪುಟ್ಟ ಗಾಯಗೊಂದಿಗೆ ಪಾರಾಗಿದ್ದು, ಸ್ಕೂಟರ್‌ನಲ್ಲೇ ಸ್ಥಳದಿಂದ ತೆರಳಿದ್ದಾನೆ. ಇದೇ ವೇಳೆ ಹಿಂದಿನಿಂದ ಬಂದ ಕಾರೊಂದು ಬಸ್ಸಿಗೆ ಢಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಹಾಗೂ ಬಸ್ಸಿನ ಹಿಂಭಾಗ ಜಖಂಗೊಂಡಿದೆ.