
ಮುಂದಿನ ಮಳೆಗಾಲಕ್ಕೆ ಮುನ್ನ 110 ಕೆವಿ ಲೈನ್ ಕಾಮಗಾರಿ ಪೂರ್ತಿ ಮಾಡಲು ಶಾಸಕರು ಸೂಚನೆ
ಸುಳ್ಯದ 110 ಕೆವಿ ವಿದ್ಯುತ್ ಲೈನ್ ಕಾಮಗಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಕಂದಾಯ, ಕೆಪಿಟಿಸಿಎಲ್, ಮೆಸ್ಕಾಂ, ಅರಣ್ಯ, ಸರ್ವೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಮಾಡಾವಿನಿಂದ ಸುಳ್ಯಕ್ಕೆ 110 ಕೆವಿ ಲೈನ್ ಎಳೆಯಲು ಒಟ್ಟು 89 ಟವರ್‌ಗಳು ನಿರ್ಮಾಣ ಮಾಡಬೇಕಾಗಿದ್ದು ಸುಳ್ಯ ತಾಲೂಕಿನಲ್ಲಿ ೫೦, ಪುತ್ತೂರು ತಾಲೂಕಿನಲ್ಲಿ 39 ಟವರ್ ಬರಲಿದೆ. ಇದರಲ್ಲಿ 9 ಟವರ್ ಕಾಮಗಾರಿ ಆಗಿದೆ. ಎರಡು ಪ್ರಗತಿಯಲ್ಲಿದೆ. ಅರಣ್ಯದಲ್ಲಿ ಸುಮಾರು 25 ಟವರ್ ನಿರ್ಮಾಣ ಆಗಬೇಕಾಗಿದ್ದು ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಅಂತಿಮ ಹಂತದಲ್ಲಿದ್ದು ಮರ ಕಟ್ಟಿಂಗ್ ಮಾಡಲು ಅನುಮತಿ ದೊರೆಯಬೇಕಾಗಿದೆ ಎಂದು ಕೆಪಿಟಿಸಿಎಲ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸುಳ್ಯ ತಾಲೂಕಿನಲ್ಲಿ ಲೈನ್ ಹಾದು ಹೋಗುವ ಮಾರ್ಗದಲ್ಲಿ ಒಟ್ಟು 40 ಟವರ್‌ಗಳ ಪೈಕಿ 20 ಟವರ್ ನಿರ್ಮಾಣದ ಸ್ಥಳ ಗುರುತಿಸಿ, ಸರ್ವೆ ನಡೆಸಿ ನಕ್ಷೆ ಮಾಡಲಾಗಿದೆ. ಇಲ್ಲಿ ಸ್ಥಳದ ಭೂಮಾಲಿಕರಿಗೆ ಮಾಹಿತಿ ನೀಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತಿದೆ. ಇನ್ನು 20 ಟವರ್ ನಿರ್ಮಾಣದ ಸ್ಥಳ ಗುರುತಿಸಿ ಸರ್ವೆ ನಡೆಸಿ ನಕ್ಷೆ ಆಗಬೇಕಾಗಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದರು.
ಅಕ್ಟೋಬರ್ 15ರ ಒಳಗೆ ಉಳಿದ 20 ಟವರ್‌ನ ಸ್ಥಳ ಗುರುತಿಸಿ, ಸರ್ವೆ ಮಾಡಿ ನಕ್ಷೆ ತಯಾರಿಸುವ ಕೆಲಸ ಆಗಬೇಕು ಎಂದು ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಸರ್ವೆ, ಕಂದಾಯ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳ ಗುರುತಿಸಿ ನಕ್ಷೆ ಮಾಡುವುದರ ಜೊತೆಗೆ ಸ್ಥಳದ ಮಾಲೀಕರಿಗೆ ಪರಿಹಾರ ನೀಡುವ ಕೆಲಸ ಆಗಬೇಕು ಎಂದು ಎಸಿಯವರು ಸೂಚಿಸಿದರು.
ಪುತ್ತೂರಿನಲ್ಲಿ ಟವರ್ ನಿರ್ಮಾಣ ಸಂಬಂಧಿಸಿ ಮುಂದಿನ ವಾರದಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು. ಎರಡೂ ತಾಲೂಕಿನಲ್ಲಿ ಒಟ್ಟೊಟ್ಟಿಗೆ ಕಾಮಗಾರಿ ನಡೆಸಬೇಕು ಎಂದು ಸೂಚಿಸಲಾಯಿತು. ಎಲ್ಲಾ ಟವರ್‌ಗಳ ಸರ್ವೆ ಮಾಡಿ ಸ್ಥಳ ಗುರುತಿಸಿ ನಕ್ಷೆ ಆದರೆ ಮುಂದಿನ 8 ತಿಂಗಳಲ್ಲಿ ಕಾಮಗಾರಿ ಪೂರ್ತಿ ಮಾಡಬಹುದು ಎಂದು ಕೆಪಿಟಿಸಿಎಲ್ ಇಂಜಿನಿಯರ್‌ಗಳು ತಿಳಿಸಿದರು. 110 ಕೆವಿ ಕಾಮಗಾರಿ ನಿರ್ಮಾಣದ ವೇಗ ಹೆಚ್ಚಿಸಲು ಎಲ್ಲಾ ಇಲಾಖೆಗಳು ಪೂರಕವಾಗಿ ಕೆಲಸ ಮಾಡಬೇಕಾಗಿದೆ ಎಂದು ಶಾಸಕರು ಹೇಳಿದರು.
ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ಚೈತನ್ಯ, ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಾಥ್ ಆಚಾರ್ಯ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಚಿನ್ ಕುಮಾರ್, ಸಹಾಯಕ ಇಂಜಿನಿಯರ್ ವಿವೇಕಾನಂದ ಶೆಣೈ, ಮೆಸ್ಕಾಂ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್, ಸಹಾಯಕ ಇಂಜಿನಿಯರ್ ಸುಪ್ರೀತ್, 110 ಕೆವಿ ಲೈನ್ ಕಾಮಗಾರಿಯ ಗುತ್ತಿಗೆದಾರ ಕಂಪೆನಿ ಹೈದ್ರಾಬಾದ್‌ನ ಸಿಎಂಆರ್‌ಎಂ ಇನ್‌ಫ್ರಾ ಇಂಜಿನಿಯರಿಂಗ್ ಪ್ರೈ.ಲಿ.ನ ಚಂದ್ರಶೇಖರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್.ಬಿ.ಎಂ, ಉಪತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್., ಸುಳ್ಯ ಎಡಿಎಲ್‌ಆರ್ ಜನೀಶ್ ಕುಮಾರ್, ಪುತ್ತೂರು ಎಡಿಎಲ್‌ಆರ್ ಶ್ರೀನಿವಾಸ ಮೂರ್ತಿ, ಶಾಸಕರ ಆಪ್ತ ಕಾರ್ಯದರ್ಶಿ ಹರೀಶ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಪ್ರಸಾದ್ ಕಾಟೂರು, ದೀರೇಶ್ ನಡುಬೈಲು ಮತ್ತಿತರರು ಉಪಸ್ಥಿತರಿದ್ದರು.