ನಾಡ ಜನತೆಯ ದಿಕ್ಕು ತಪ್ಪಿಸುವುದು ಸಲ್ಲ, ಕೂಡಲೇ ಸಚಿವ ಹೆಚ್.ಸಿ. ಮಹದೇವಪ್ಪ ಕ್ಷಮೆಯಾಚಿಸಿ: ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ನಾಡ ಜನತೆಯ ದಿಕ್ಕು ತಪ್ಪಿಸುವುದು ಸಲ್ಲ, ಕೂಡಲೇ ಸಚಿವ ಹೆಚ್.ಸಿ. ಮಹದೇವಪ್ಪ ಕ್ಷಮೆಯಾಚಿಸಿ: ಹಿಂದೂ ಜನಜಾಗೃತಿ ಸಮಿತಿ ಆಗ್ರಹ


ಮಂಗಳೂರು: ಸಚಿವ ಹೆಚ್.ಸಿ. ಮಹದೇವಪ್ಪ ಅವರು ನಾಡಿನ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.

ಸಚಿವ ಹೆಚ್.ಸಿ. ಮಹದೇವಪ್ಪನವರು ಮಂಡ್ಯದ ಶ್ರೀರಂಗಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ “ಕನ್ನಂಬಾಡಿ ಕಟ್ಟೋದಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ರು. ಆದರೆ, ಈಗ ಅದನ್ನು ಹೇಳೋಕೆ ಯಾರಿಗೂ ಧೈರ್ಯ ಇಲ್ಲ. ಕೆ.ಆರ್.ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಅದನ್ನು ಕಾಣಬಹುದು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇಂದು ಈ ಹೇಳಿಕೆಗೆ ನಾಡಿನಾದ್ಯಂತ ವಿರೋಧ ವ್ಯಕ್ತವಾಗುತ್ತಿರುವಾಗ ಇಂದು ಪುನಃ ಅವರ ಹೇಳಿಕೆಯನ್ನು ತಿರುಚಿ “1911 ರಲ್ಲಿ ಕೃಷ್ಣರಾಜ ಒಡೆಯರ್ ಅಣೆಕಟ್ಟು ಕಟ್ಟುವಾಗ ಅಲ್ಲಿ 1794 ರ ಪರ್ಷಿಯನ್ ಭಾಷೆಯ ಕಲ್ಲು ಸಿಗುತ್ತದೆ, ಅದನ್ನು ನೋಡಿದಾಗ ಟಿಪ್ಪುರವರಿಗೆ ಆಗಲೇ ಹೊಲಗಳಿಗೆ ನೀರು ಕೊಡಬೇಕೆಂಬ ಚಿಂತನೆ ಇದ್ದಿರಬಹುದು” ಎಂದು ತಿರುಚಿದ್ದಾರೆ. 

ಸಚಿವರ ಈ ಹೇಳಿಕೆ ‘ಕಳ್ಳನಿಗೊಂದು ಪಿಳ್ಳೆ ನೆವ’ದಂತಿದ್ದು ಚಿಕ್ಕ ಮಕ್ಕಳು ಕೇಳಿದರೂ ನಗೆಪಾಟಲಿಗೀಡಾಗುವಂತಿದೆ. ರಾಜ್ಯದ ಇಂತಹ ಮಹತ್ತರ ಸ್ಥಾನದಲ್ಲಿದ್ದುಕೊಂಡು ಜನರನ್ನು ಈ ರೀತಿ ಮೂರ್ಖರನ್ನಾಗಿಸುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಸಚಿವರ ನಡೆ ಅತ್ಯಂತ ಖಂಡನೀಯ, ಸಚಿವರು ಇದಕ್ಕೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಖಂಡಿಸಿದ್ದಾರೆ.

ಸಚಿವರು ತಮ್ಮ ಹೇಳಿಕೆಯಲ್ಲಿ, ಟಿಪ್ಪು ಸುಲ್ತಾನನು ಮಸೀದಿಯ ಅಜಾನ್ ಜೊತೆಗೆ ಒಂದು ಕಡೆ ದೇವಸ್ಥಾನದ ಘಂಟೆಯ ನಾದವನ್ನು ಸಹ ಕೇಳುತ್ತಿದ್ದನು, ಅವನು ಧರ್ಮ ಸಹಿಷ್ಣುವಾಗಿದ್ದ ಎಂದಿದ್ದಾರೆ. ಅಸಲಿಗೆ ಟಿಪ್ಪು ಸುಲ್ತಾನ್ ಒಬ್ಬ ಮತಾಂಧ ಆಗಿದ್ದ, ಅವನು ಶ್ರೀರಂಗಪಟ್ಟಣದ ಮೂಡಲ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಾಶ ಮಾಡಿ ಆ ಮೂರ್ತಿಯನ್ನು ನದಿಗೆ ಎಸೆದು ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದ. ಅದೇ ರೀತಿಯಲ್ಲಿ ಕೊಡಗಿನ ಮೇಲೆ ದಾಳಿ ಮಾಡಿ ಭಾಗಮಂಡಲದ ಅನೇಕ ದೇವಸ್ಥಾನಗಳು ನಾಪೋಕಲಿನ ಹಲವು ದೇವಸ್ಥಾನಗಳನ್ನು ನಾಶ ಮಾಡಿದ್ದ. ಸಾವಿರಾರು ಹಿಂದೂಗಳನ್ನು ಶ್ರೀರಂಗಪಟ್ಟಣಕ್ಕೆ ಕರೆತಂದು ಮತಾಂತರ ಮಾಡಿದ್ದ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಳಿ ಮಾಡಿ ಅನೇಕ ಹಿಂದೂ ದೇವಸ್ಥಾನಗಳನ್ನು ಅದಲ್ಲದೆ ಚರ್ಚ್ ಗಳನ್ನು ನಾಶ ಮಾಡಿದ್ದ. ತನ್ನ ಆಡಳಿತ ಭಾಷೆ ಕನ್ನಡ ತೆಗೆದು ಉರ್ದು ಮತ್ತು ಪರ್ಷಿಯನ್ ಭಾಷೆಯನ್ನಾಗಿ ಮಾಡಿದ್ದ, ಹೀಗೆ ಮತಾಂಧ, ದೇವಸ್ಥಾನಗಳ ಮೂರ್ತಿ ಭಂಜಕ ಟಿಪ್ಪು ಸುಲ್ತಾನನ ವೈಭವೀಕರಣ ಮಾಡುವುದು ನಾಡಿನ ಇತಿಹಾಸಕ್ಕೆ ಮಾಡಿದ ಅಪಮಾನವಾಗಿದೆ. ಹೆಚ್ ಸಿ ಮಹದೇವಪ್ಪರವರ ಹೇಳಿಕೆ, ‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತಿದೆ, ಈ ರೀತಿ ನಾಡಿನ ಜನತೆಯ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ, ಕೂಡಲೇ ಕ್ಷಮೆಯಾಚಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article