ಆಪ್ತ ಸಮಾಲೋಚನೆ ಬಯಸಿ ಬರುವವರ ಮನಸ್ಥಿತಿ ಭಿನ್ನವಾಗಿರುತ್ತದೆ: ಡಾ. ಶರಣ್ಯ ಶೆಟ್ಟಿ
ನಗರದ ರೋಶನಿ ನಿಲಯ ಕಾಲೇಜಿನ ಎಂಎಸ್ಸಿ ಕೌನ್ಸೆಲಿಂಗ್ ವಿಭಾಗವು ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಕೌನ್ಸೆಲಿಂಗ್ ಪ್ರಾಕ್ಟೀಶನರ್ಗಳಿಗಾಗಿ ಹಮ್ಮಿಕೊಂಡ ‘ಮೈಂಡ್ ಮೊಸಾಯಿಕ್’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೌನ್ಸೆಲಿಂಗ್ ಕ್ಷೇತ್ರದಲ್ಲಿಯೂ ಸೃಜನಶೀಲತೆಯೊಂದಿಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದ ಅವರು, ಕೌನ್ಸೆಲಿಂಗ್ ಕೇವಲ ಚಿಕಿತ್ಸೆ ಮಾತ್ರವಲ್ಲ, ಬದಲಾಗಿ ಸಮಸ್ಯೆ ಪರಿಹಾರ, ಮಾರ್ಗದರ್ಶನ ಹಾಗೂ ಸಾಮಾಜಿಕ ಪರಿವರ್ತನೆಯ ಕಾರ್ಯ ಎಂದರು.
ಆಪ್ತ ಸಮಾಲೋಚಕರು ತಮ್ಮ ಆಳವಾದ ಜ್ಞಾನ, ಸಹಾನುಭೂತಿಯ ಮೂಲಕ ತಮ್ಮಲ್ಲಿಗೆ ಚಿಕಿತ್ಸೆಗೆ ಬರುವವರ ಮೇಲೆ ಆಳವಾದ ಹಾಗೂ ಶಾಶ್ವತ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ಸಮಗ್ರತೆ ಹಾಗೂ ಮುಕ್ತತೆಯ ಆಪ್ತ ಸಮಾಲೋಚನೆಯು ವೈಯಕ್ತಿಕ ಚಿಕಿತ್ಸೆ ಹಾಗೂ ಸಾಮಾಜಿಕ ಯೋಗಕ್ಷೇಮದ ನಡುವಿನ ಕೊಂಡಿಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಐಕ್ಯುಎಸಿ ಸಂಯೋಜಕಿ ಡಾ. ಮೀನಾ ಮೊಂತೆರೋ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ರೀತಿಯಲ್ಲಿ ಸಂತೋಷ ಹಾಗೂ ಜೀವನದ ಅರ್ಥವನ್ನು ಕೊಂಡುಕೊಳ್ಳುವಂತೆ ಪ್ರತಿಯೊಬ್ಬನ ಮನಸ್ಸು ವಿಶಿಷ್ಟವಾಗಿರುತ್ತದೆ ಎಂಬುದನ್ನು ಕೌನ್ಸೆಲರ್ಗಳು ಗಮನದಲ್ಲಿರಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಎಂಎಸ್ಸಿ ಕೌನ್ಸೆಲಿಂಗ್ ಮುಖ್ಯಸ್ಥರಾದ ಡಾ.ರೋಸಾ ನಿಮ್ಮಿ ಮ್ಯಾಥ್ಯೂ, ಸಂಘಟನಾ ಕಾರ್ಯದರ್ಶಿ ತಾನಿ ಅನ್ವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕಿ ಸರಾ ನಾಸಿರ್ ಶೇಖ್ ಸ್ವಾಗತಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಕೌನ್ಸೆಲಿಂಗ್ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಆಪ್ತ ಸಮಾಲೋಚಕರೊಂದಿಗೆ ಮಾಹಿತಿ ಹಂಚಿಕೊಂಡರು.