
ಕರಾವಳಿಯಲ್ಲಿ ಉತ್ತಮ ಮಳೆ: ನಾಳೆ ದ.ಕ ಹಾಗೂ ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಣೆ
ಕರಾವಳಿಯಲ್ಲಿ ಗುರುವಾರ ಧಾಕಾರಾರ ಮಳೆ ಸುರಿದಿದ್ದು, ನದಿ, ಹಳ್ಳ, ಕೊಳ್ಳ, ತೊರೆಗಳು ತುಂಬಿ ಹರಿಯುತ್ತಿವೆ. ಗ್ರಾಮೀಣ ಭಾಗದಲ್ಲೂ ದಿನವಿಡೀ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗಿನ ಹೊತ್ತು ನಿರಂತರ ಮಳೆ ಸುರಿದ ಕಾರಣ ತಗ್ಗು ಪ್ರದೇಶಗಳಿಗೆ ಕೆಲವು ಹೊತ್ತು ನೀರು ನುಗ್ಗಿದೆ. ಗುರುವಾರ ಜಿಲ್ಲೆಯ ಹಲವು ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇಡೀ ದಿನ ಮಳೆ ಸುರಿದ ಕಾರಣ ವಾತಾವರಣ ಚಳಿ ಹಿಡಿಸಿದ್ದು, ಬಿಡುವಿಲ್ಲದೆ ಮಳೆ ಸುರಿಯುತ್ತಲೇ ಜನಜೀವನಕ್ಕೆ ಆತಂಕ ತಂದೊಡ್ಡಿದೆ. ಉತ್ತಮ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳು ತುಂಬಿ ಹರಿಯುತ್ತಿದ್ದು, ಅಲ್ಪ ಪ್ರವಾಹದ ಭೀತಿಗೆ ಒಳಗಾಗಿವೆ. ಮೂಲ್ಕಿ, ಹಳೆಯಂಗಡಿ, ಪಾವಂಜೆಗಳಲ್ಲಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಬೀತಿ ಎದುರಾಗಿತ್ತು ನಂದಿನಿ, ಶಾಂಭವಿ, ಫಲ್ಗುಣಿ, ನೇತ್ರಾವತಿ ನದಿ ಸೇರಿದಂತೆ ಹೊಳೆಗಳಲ್ಲೂ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ.
ಮಳೆಯಿಂದಾಗಿ ಜಿಲ್ಲೆಯ ಕಲ್ಲಡ್ಕ, ಮಾಣಿಗಳಲ್ಲಿ ಹೆದ್ದಾರಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಗುರುವಾರ ಬೆಳಗ್ಗಿನವರೆಗೆ ಜಿಲ್ಲೆಯ ದಿನದ ಸರಾಸರಿ ಮಳೆ 49.6 ಮಿ.ಮೀ. ಆಗಿದೆ. ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಗರಿಷ್ಠ 85.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬೆಳ್ತಂಗಡಿ 35.2 ಮಿ.ಮೀ, ಬಂಟ್ವಾಳ 43.4 ಮಿ.ಮೀ, ಪುತ್ತೂರು 53.8 ಮಿ.ಮೀ, ಸುಳ್ಯ 72.8 ಮಿ.ಮೀ, ಮೂಡುಬಿದಿರೆ 32.4 ಮಿ.ಮೀ, ಕಡಬ 37.7 ಮಿ.ಮೀ, ಮೂಲ್ಕಿ 70 ಮಿ.ಮೀ. ಹಾಗೂ ಉಳ್ಳಾಲ 46.8 ಮಿ.ಮೀ. ಮಳೆ ವರದಿಯಾಗಿದೆ. ಉಪ್ಪಿನಂಗಡಿ ನೇತ್ರಾವತಿ ನದಿ 25.9 ಮೀಟರ್ ಹಾಗೂ ತುಂಬೆ ನೇತ್ರಾವತಿ ನದಿ 3.6 ಮೀಟರ್‌ನಲ್ಲಿ ಹರಿಯುತ್ತಿದೆ.
ಇಂದು ಉತ್ತಮ ಮಳೆ ಸಾಧ್ಯತೆ
ಕರಾವಳಿಯಲ್ಲಿ ಗುರುವಾರ 28.7 ಡಿ.ಸೆ ಗರಿಷ್ಟ, 22.3ಡಿ.ಸೆ ಕನಿಷ್ಟ ಉಷ್ಟಾಂಶ ದಾಖಲಾಗಿದೆ. ಕರಾವಳಿ ಜಿಲ್ಲೆಗಳಾದ್ಯಂತ ಮುಂದಿನ 24 ದಿನ ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಪಶ್ಚಿಮಘಟ್ಟದ ಕೆಳಭಾಗದ ಪ್ರದೇಶಗಳಾದ ಚಾರ್ಮಡಿ, ಶಿರಾಡಿ, ಆಗುಂಬೆ ಸುತ್ತಮುತ್ತ ಉತ್ತಮ ಮಳೆಯ ಮುನ್ಸೂಚನೆ ಇದೆ. ಕರಾವಳಿಯಲ್ಲಿ ಗಂಟೆಗೆ 40ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸಂಭವಿಸಬಹುದಾದ ಹಾನಿ ತಪ್ಪಿಸಲು ಎನ್‌ಡಿಆರ್‌ಎಫ್ ತಂಡ 24*7 ರೀತಿಯಲ್ಲಿ ಸನ್ನದ್ದವಾಗಿದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಒಡಿಸ್ಸಾದಿಂದ, ಮಧ್ಯಪ್ರದೇಶ, ಮಹಾರಾಷ್ಟ್ರ ತನಕ ವ್ಯಾಪಿಸಿದ್ದು, ಸೆಪ್ಟೆಂಬರ್ 3, 4ರಂದು ಗುಜರಾತ್ ತಲಪುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಆ.29ರ ರಾತ್ರಿ ವರೆಗೂ ಕರಾವಳಿಯಲ್ಲಿ ಇದೇ ರೀತಿಯ ವಾತಾವರಣ ಮುಂದುವರಿಯ ಸಾಧ್ಯತೆಗಳಿದ್ದು, 30ರಿಂದ ಮಳೆ ಸ್ವಲ್ಪ ಕಡಿಮೆಯಾದರೂ ಸಾಮಾನ್ಯ ಮಳೆ ಸೆಪ್ಟೆಂಬರ್ 4ರ ತನಕ ಮುಂದುವರಿಯುವ ಲಕ್ಷಣಗಳಿವೆ.