ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಸತತ ನಾಲ್ಕನೇ ಬಾರಿ ಅಟಲ್ ಪಿಂಚಣಿ ಯೋಜನೆಯ ರಾಷ್ಟ್ರೀಯ ಪ್ರಶಸ್ತಿ
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 2024-25ನೇ ಸಾಲಿಗೆ ಎಸ್ ಸಿಡಿಸಿಸಿ ಬ್ಯಾಂಕ್ ಚಂದಾದಾರರ ದಾಖಲಾತಿಯಲ್ಲಿ 3179 ಚಂದಾದಾರರನ್ನು ನೊಂದಾಯಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದೆ. ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ದಕ್ಷ ಮುಂದಾಳತ್ವದಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಸತತ ನಾಲ್ಕು ವರ್ಷಗಳಿಂದ ಪಡೆದಿರುವುದು ಗಮನಾರ್ಹ ಸಾಧನೆ ಆಗಿದೆ.
ಈಚೆಗೆ ನವದೆಹಲಿಯಲ್ಲಿ ನಡೆದ ಎಪಿವೈ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾರತ ಸರಕಾರದ ಹಣಕಾಸು ಸೇವೆಗಳ ಜಂಟಿ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಗೋಯಲ್, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾದ ಎಸ್. ರಾಮನ್, ಮುಖ್ಯ ಮಹಾಪ್ರಬಂಧಕರಾದ ಪ್ರವೇಶ್ ಕುಮಾರ್ ಉಪಸ್ಥಿತಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಮಹಾಪ್ರಬಂಧಕರಾದ ಸುನಿಲ್ ಕುಮಾರ್ ಹೊಳ್ಳ ಹಾಗೂ ಸಹಾಯಕ ಮಹಾಪ್ರಬಂಧಕರಾದ ರಾಜೇಶ್ ಶೆಟ್ಟಿ ಅವರು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಮಮತಾ ಶಂಕರ್ ಅವರಿಂದ ಸ್ವೀಕರಿಸಿದ್ದು, ಈ ಪ್ರಶಸ್ತಿಯನ್ನು ಶುಕ್ರವಾರ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.