ಮೊದಲೇ ಮಂಪರು ಪರೀಕ್ಷೆ ನಡೆಸಿದ್ದರೆ ವಿಪಕ್ಷಗಳ ವೃಥಾ ಆರೋಪ, ನಗೆಪಾಟಲಿಗೆ ಆಸ್ಪದ ಸಿಗುತ್ತಿರಲಿಲ್ಲ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸಾವಿರಾರು ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿದ್ದ ಅನಾಮಿಕ ದೂರುದಾರನ ದೂರಿನ ಸತ್ಯಾಸತ್ಯತೆ ಬಗ್ಗೆ ಆರಂಭದಲ್ಲೇ ಮಂಪರು ಪರೀಕ್ಷೆ ನಡೆಸಿದ್ದರೆ... ತಲೆಬುರುಡೆ ಪ್ರಹಸನದ ಪ್ರಕರಣ ನಡೆಯುತ್ತಿರಲಿಲ್ಲ, ಮಾತ್ರವಲ್ಲ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪ್ರಬುದ್ಧತೆಯಿಂದ ವರ್ತಿಸಿದ್ದರೆ ವಿಪಕ್ಷಗಳ ವೃಥಾ ಆರೋಪ, ನಗೆಪಾಟಲಿಗೆ ಆಸ್ಪದ ಸಿಗುತ್ತಿರಲಿಲ್ಲ ಎಂದು ಮಾತನಾಡಿಕೊಳ್ಳುವಂತಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ಸಾವಿರಾರು ಅನಾಥ ಶವಗಳನ್ನು ಹೂಳಲಾಗಿದೆ. ಅತ್ಯಾಚಾರ, ಕೊಲೆಗಳು ನಡೆದಿವೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಬರೆದ ಪತ್ರ ವೈರಲ್ ಆಗುತ್ತಿದ್ದಂತೆ ಆ ಬಗ್ಗೆ ಮಂಗಳೂರು ಎಸ್ಪಿಗೆ ದೂರು ನೀಡಲು ಬೆಂಗಳೂರಿನಿಂದ ವಕೀಲ ತಂಡವೊಂದು ಆಗಮಿಸಿತ್ತು. ಎಸ್ಪಿ ಸಿಗದಾಗ ಮತ್ತೆ ವಾರದ ಬಳಿಕ ಆಗಮಿಸಿ ಎಸ್ಪಿಗೆ ಹಾಗೂ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿ ತೆರಳಿತ್ತು. ನಂತರದ ಬೆಳವಣಿಗೆಯಲ್ಲಿ ಅನಾಮಿಕ, ಮುಸುಕುಧಾರಿ ವ್ಯಕ್ತಿ ನನಗೆ ಪಾಪಪ್ರಜ್ಞೆ ಕಾಡಿದ್ದು, ಹಾಗಾಗಿ ವಿಳಂಬವಾಗಿ ದೂರು ನೀಡುತ್ತಿರುವುದಾಗಿ ಹೇಳಿದ್ದ. ಕೋರ್ಟ್‌ಗೆ ತಲೆಬುರುಡೆ ಸಮೇತ ಆಗಮಿಸಿ ದೂರು ನೀಡಿದ್ದ.
ಅಲ್ಲಿವರೆಗೆ ಈ ದೂರಿನ ಬಗ್ಗೆ ಕೂಲಂಕಷವಾಗಿಯೇ ಪರಿಶೀಲನೆ ನಡೆಸುತ್ತಿದ್ದ ಮಂಗಳೂರು ಪೊಲೀಸರು, ಆತ ತಲೆಬುರುಡೆ ಸಮೇತ ಕೋರ್ಟ್‌ಗೆ ಹಾಜರಾದಾಗ ಆತನ ನಡವಳಿಕೆಯ ಬಗ್ಗೆಯೇ ಸಂಶಯಗೊಂಡಿದ್ದರು. ಅಂದೇ ಬೆಳ್ತಂಗಡಿ ಕೋರ್ಟ್‌ನಲ್ಲಿ ಆತನ ಮಂಪರು ಪರೀಕ್ಷೆ ನಡೆಸಿ ವಿಚಾರಣೆ ನಡೆಸುವ ಅವಶ್ಯಕತೆಯನ್ನು ಮಂಗಳೂರಿನ ಪೊಲೀಸರು ಕಂಡುಕೊಂಡಿದ್ದರು.
ಎಸ್ಪಿ ಹೊರಡಿಸಿದ್ದ ಪ್ರಕಟಣೆ:
ತಲೆಬುರುಡೆಯನ್ನು ಕೋರ್ಟ್‌ಗೆ ಹಾಜರುಪಡಿಸಬೇಕಾದರೆ ಅದಕ್ಕೆ ಅದರದ್ದೇ ಆದ ಕಾನೂನು ಕಟ್ಟಳೆ ಇದೆ. ಆದರೆ ಇಲ್ಲಿ ಅನಾಮಿಕ ತಾನೇ ಸ್ವತಃ ತಲೆಬುರುಡೆಯನ್ನು ಅಗೆದು ತಂದಂತೆ ಕೋರ್ಟ್‌ಗೆ ಹಾಜರುಪಡಿಸಿದ್ದ. ಆತನ ಈ ನಡವಳಿಕೆ ಪೊಲೀಸರಿಗೆ ಆತನ ಬಗ್ಗೆ ಶಂಕೆ ಮೂಡಲು ಕಾರಣವಾಗಿತ್ತು. ಹೀಗಾಗಿ ಆತನಿಗೆ ಪೊಲೀಸ್ ರಕ್ಷಣೆ ನೀಡಬೇಕಾದರೆ ಆತ ಎಲ್ಲಿದ್ದಾನೆ ಎಂದು ತಿಳಿಸುವಂತೆ ವಕೀಲರಿಗೆ ಸೂಚಿಸಿತ್ತು. ಆದರೆ ವಕೀಲರು ಆತ ಎಲ್ಲಿದ್ದಾನೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಹಾಗಾಗಿ ಆತ ನಮಗೆ ಸಿಗುತ್ತಿಲ್ಲ, ಆತ ಎಲ್ಲಿದ್ದಾನೆ ಎಂದು ವಕೀಲರು ಹೇಳುತ್ತಿಲ್ಲ, ಆದ್ದರಿಂದ ಆತನಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ವಕೀಲರಿಗೆ ಅಧಿಕೃತ ಮಾಹಿತಿ ನೀಡಿದ್ದರು. ಅಲ್ಲದೆ ಆತನ ಮಂಪರು ಪರೀಕ್ಷೆ ನಡೆಸುವ ಅಗತ್ಯವಿದೆ ಎಂದೂ ಮಾಧ್ಯಮಕ್ಕೆ ಎಸ್ಪಿ ಹೇಳಿಕೆ ಬಿಡುಗಡೆಗೊಳಿಸಿದ್ದರು.
ಎಸ್ಪಿ ನೀಡಿದ ಈ ಹೇಳಿಕೆಗೆ ಅನಾಮಿಕನ ಪರವಾಗಿ ಹೋರಾಟ ನಡೆಸುವವರು ವಿರೋಧ ವ್ಯಕ್ತಪಡಿಸಿದ್ದರು. ಅನಾಥ ಶವಗಳ ಪತ್ತೆ ಪ್ರಕರಣದ ತನಿಖೆಯನ್ನು ಎಸ್ಪಿ ಬದಲು ಎಸ್‌ಐಟಿಗೆ ವಹಿಸುವಂತೆ ಹೋರಾಟಗಾರರು ಸರ್ಕಾರವನ್ನು ಆಗ್ರಹಿಸಿದ್ದರು. ಆದರೆ ಈ ಪ್ರಕರಣದ ತನಿಖೆಯನ್ನು ಪೊಲೀಸರೇ ನಡೆಸಲು ಸಮರ್ಥರಿದ್ದಾರೆ, ಎಸ್‌ಐಟಿ ತನಿಖೆಯ ಅಗತ್ಯ ಇಲ್ಲ ಎಂದು ಸರ್ಕಾರ ಕೂಡ ಹೇಳಿತ್ತು.
ಈ ಮಧ್ಯೆ ಅನಾಮಿಕನ ಮಂಪರು ಪರೀಕ್ಷೆಗೆ ಮಂಗಳೂರು ಪೊಲೀಸರು ಎಲ್ಲ ಸಿದ್ಧತೆಯನ್ನು ನಡೆಸಿದ್ದರು. ಕೋರ್ಟ್ ಕೂಡ ಜುಲೈ 23ರೊಳಗೆ ಅನುಮತಿಸುವ ನಿರೀಕ್ಷೆ ಇತ್ತು. ಈ ವಿಚಾರ ತಿಳಿದ ಅನಾಮಿಕನ ಪರವಾದ ಹೋರಾಟಗಾರರು, ಎಡಪಂಥೀಯರು ಸರ್ಕಾರಕ್ಕೆ ಬಾಹ್ಯ ಒತ್ತಡ ತಂದು ಎಸ್‌ಐಟಿ ತನಿಖೆ ಘೋಷಿಸುವಲ್ಲಿ ಯಶಸ್ವಿಯಾದರು.
ಒಂದು ವೇಳೆ ಎಸ್‌ಐಟಿ ರಚನೆಯಾಗದೆ ಮಂಗಳೂರು ಪೊಲೀಸರೇ ತನಿಖೆ ಮುಂದುವರಿಸಿದ್ದರೆ ಮಂಪರು ಪರೀಕ್ಷೆ ಮೊದಲೇ ನಡೆದುಹೋಗುತ್ತಿತ್ತು. ಆಗ ಅನಾಥ ಶವಗಳ ಬಗ್ಗೆ ಅನಾಮಿಕನ ಆರೋಪ, ಅದರ ಸತ್ಯಾಸತ್ಯತೆ ಎಲ್ಲವೂ ಸುಲಭದಲ್ಲಿ ಹೊರಬರುತ್ತಿತ್ತು ಎಂಬ ಮಾತು ಪ್ರಜ್ಞಾವಂತ ನಾಗರಿಕ ವಲಯದಲ್ಲಿ ಕೇಳಿಬರುತ್ತಿದೆ. ಮಂಗಳೂರು ಪೊಲೀಸರಿಂದ ತನಿಖೆ ಕೈತಪ್ಪಿದ ಮೇಲೂ ಎಸ್‌ಐಟಿ ಕೂಡ ಮೊದಲು ಮಂಪರು ಪರೀಕ್ಷೆ ನಡೆಸದೆ ನೇರವಾಗಿ ಆತನ ಮಾತನ್ನೇ ನಂಬಿ ಅನಾಥ ಶವಗಳಿಗಾಗಿ ಬೆಟ್ಟ ಅಗೆಯಲು ಮುಂದಾಗಿದ್ದು ವಿಪಕ್ಷಗಳ ಅಪಹಾಸ್ಯಕ್ಕೆ ಎಡೆಮಾಡಿಕೊಡುವಂತಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ.
ಮಂಗಳೂರಿನ ಪೊಲೀಸರಿಗೆ ಅನಾಮಿಕನ ತಲೆಬುರುಡೆ ಪ್ರಹಸನದ ಒಳಮರ್ಮ ಗೊತ್ತಾಗಿದ್ದು ಎಸ್‌ಐಟಿಗೆ ಮೊದಲೇ ಗೊತ್ತಾಗಲಿಲ್ಲವೇ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ.
ಆದರೂ ಪ್ರಣವ್ ಮೊಹಾಂತಿ ನೇತೃತ್ವದ ಎಸ್‌ಐಟಿ ತಂಡ ಅನಾಮಿಕ ದೂರುದಾರ ಗುರುತಿಸಿದ ಜಾಗಗಳ ಉತ್ಖನನಕ್ಕೆ ಅವಕಾಶ ಮಾಡಿಕೊಟ್ಟು ಸತ್ಯಾಂಶವನ್ನು ಬಯಲಿಗೆ ತರುವಲ್ಲಿ ತನ್ನ ದಕ್ಷತೆ ತೋರ್ಪಡಿಸಿದೆ. ದೂರುದಾರ ಪರ ಹೋರಾಟಗಾರರು ಸೂಚಿಸಿದ ಅಧಿಕಾರಿಗಳೇ ತನಿಖಾ ತಂಡದ ನೇತೃತ್ವ ವಹಿಸಿದರೂ ನಾನಾ ಟೀಕೆ, ಆರೋ ಪಗಳ ಹೊರತೂ ಎಸ್‌ಐಟಿ ತಂಡ ತಲೆಬುರುಡೆ ಪ್ರಕರಣವನ್ನು ಒಂದು ಹಂತಕ್ಕೆ ತಲುಪಿಸುವಲ್ಲಿ ಕಾರ್ಯದಕ್ಷತೆ ತೋರಿಸಿರುವುದು ನಾಗರಿಕ ಸಮಾಜದ ಪ್ರಶಂಸೆಗೆ ಪಾತ್ರವಾಗಿದೆ.