ಕರಾವಳಿಯಲ್ಲಿ ಮಳೆ ಕ್ಷೀಣ ಸಾಧ್ಯತೆ: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಪ್ರಭಾವ ಕ್ಷೀಣ
ಮಂಗಳೂರು: ಕಳೆದ ವಾರ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಪರಿಣಾಮ ಕೆಲವು ದಿನದ ಹಿಂದೆ ಕರಾವಳಿಯಲ್ಲಿ ಸಧಾರಣಕ್ಕಿಂತ ಉತ್ತಮ ಮಳೆಯಾಗಿದ್ದು, ವಾಯುಭಾರ ಕುಸಿತ ಪ್ರಭಾವ ಕ್ಷೀಣಗೊಂಡಿದ್ದರಿಂದ ಮುಂದಿನ ಧೀರ್ಘ ಅವಧಿ ಕಾರಾವಳಿಯಲ್ಲಿ ಮಳೆ ಕ್ಷೀಣ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಹಲವು ದಿನಗಳಿಂದ ಕರಾವಳಿಯಲ್ಲಿ ಮಳೆಯಾಗಿದ್ದು, ಬುಧವಾರ ದಿನಪೂರ್ತಿ ಬಿಸಿಲು ಸಹಿತ ಅಲ್ಪ ಮೋಡಕವಿದಿತ್ತು. ಮಂಗಳೂರು ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಂಗಳವಾರ ರಾತ್ರಿ ಹಲವು ಗಂಟೆಗಳ ಕಾಲ ಉತ್ತಮಮಳೆಯಾಗಿದ್ದರೂ ಬುಧವಾರ ಬೆಳಗ್ಗೆ ಜಿಲ್ಲೆಯ ಹಲವಡೆ ಮೋಡಕವಿದ ವಾತಾವರಣ ಕಂಡುಬಂದ್ದು ಮನಂತರ ಬಿಸಿಲು ಆವರಿಸಿತ್ತು. ಸುಳ್ಯ, ಕಡಬ ತಾಲೂಕಿನ ಹಲವೆಡೆ ಕೆಲವೊಮ್ಮೆ ಹನಿ ಮಳೆಯಾಗಿದೆ. ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಸುತ್ತಮುತ್ತ ಸಂಜೆ ವೇಳೆ ಗಾಳಿ ಸಹಿತ ಗುಡುಗು ಇತ್ತು. ಮುಂದಿನ ದಿನಗಳಲ್ಲಿ ಮುಂಗಾರು ಮತ್ತಷ್ಟು ದುರ್ಬಲಗೊಳ್ಳಲಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ 3ನೇ ವಾರ ಹಾಗೂ ಕೋನೆಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳಿವೆ. ಈ ಭಾಗಗಳಲ್ಲಿ ಆಗಸ್ಟ್ 31ರ ನಂತರ ಮಳೆಯ ಸಾಧ್ಯತೆ ಕಡಿಮೆ. ವಾಯುಭಾರ ಕುಸಿತದಂತಹ ವಿದ್ಯಮಾನಗಳು ಉಂಟಾದರೆ ಮಾತ್ರ ಮಳೆಯಾಗುವ ಸಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೆ.15ರಿಂದ ಮತ್ತೆ ವಾಯುಭಾರ ಕುಸಿತ ಸಾಧ್ಯತೆ
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ಒಂದೆರಡು ತುಂತುರು ಮಳೆಯ ಮುನ್ಸೂಚೆನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಈಗಿನಂತೆ ಆಗಸ್ಟ್ 28ರ ತನಕವೂ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಗಳಿದ್ದು, ಸೆ.15ರಿಂದ 20ರ ತನಕ ವಾಯುಭಾರ ಕುಸಿತದ ಪರಿಣಾಮದಿಂದ ಮುಂಗಾರು ಚುರುಕಾಗುವ ಲಕ್ಷಣಗಳಿವೆ.
ದ.ಕ. ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನವರೆಗೆ 21.7 ಮಿಲಿ ಮೀಟರ್ ಮಳೆ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಗಂಟೆಗೆ 35ಕಿ.ಮೀ ನಿಂದ 40ಕಿ.ಮೀ ವರೆಗೆ ಇರಲಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 33.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಗುರುವಾರ ವೇಳೆ ತುಸು ಏರಿಳಿಕೆಯಾಗುವ ಸಾಧ್ಯತೆ ಇದೆ.