‘ನಾರಾಯಣಗುರು’ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ: ಅಪಮಾನ ಸಾಬೀತು ಮಾಡಿದರೆ ರಾಜಕೀಯ ಸನ್ಯಾಸ
ಪುತ್ತೂರು: ಬ್ರಹ್ಮಶ್ರೀ ನಾರಾಯಣಗುರುಗಳ ಟ್ಯಾಬ್ಲೊವನ್ನು ದೆಹಲಿಯ ಗಣರಾಜ್ಯೋತ್ಸವದ ಪೆರೇಡಿನಲ್ಲಿ ಭಾಗವಹಿಸದಂತೆ ತಡೆದ ಕೇಂದ್ರದ ಬಿಜೆಪಿ ಸರ್ಕಾರದ ಘಟನೆಯನ್ನು ಇನ್ನೂ ಯಾರೂ ಮರೆತಿಲ್ಲ. ದಕ ಬಿಜೆಪಿ ನಾಯಕರಿಗೆ ನಾರಾಯಣಗುರುಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇಲ್ಲ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಾರಾಯಣಗುರುಗಳಿಗೆ ನಾನು ಅಪಮಾನ ಮಾಡಿರುವುದಾಗಿ ಬಿಜೆಪಿ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಆಪಾದನೆ ಮಾಡಿದ್ದಾರೆ. ಬಿಜೆಪಿಯವರು ಇದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ. ನನ್ನನ್ನೂ ಸೇರಿದಂತೆ ಮುಸ್ಲಿಂ, ಕ್ರೈಸ್ತ ಧರ್ಮೀಯಯರು ನಾರಾಯಣ ಗುರುಗಳ ಮೇಲೆ ಅಪಾರ ಗೌರವ ಹೊಂದಿದ್ದಾರೆ ಎಂದರು.
ಜನಾರ್ದನ ಪೂಜಾರಿ ಅವರು ತಮ್ಮ ಹೇಳಿಕೆಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ವಿಚಾರ ಎತ್ತಿದ್ದನ್ನು ನಾನು ಪ್ರಶ್ನಿಸಿದ್ದೆ. ಪೂಜಾರಿ ಅವರ ನಾಯಕತ್ವವನ್ನು ಗೌರವಿಸಿಕೊಂಡೇ ನಾನು ಅವರ ಈ ಹೇಳಿಕೆಯನ್ನಷ್ಟೇ ಖಂಡಿಸಿದ್ದೆ. ಪೂಜಾರಿಯವರದು ನಾರಾಯಣ ಗುರು ಸಿದ್ಧಾಂತವೇ? ಸಾವರ್ಕರ್ ಸಿದ್ಧಾಂತವೇ ಎಂದು ಪ್ರಶ್ನಿಸಿದ್ದೆ. ಇದರಲ್ಲಿ ತಪ್ಪೇನಿದೆ? ಇದು ಗುರುಗಳಿಗೆ ಅವಮಾನ ಮಾಡಿದಂತಾಗುತ್ತದೆಯೇ? ಬಿಜೆಪಿ ಇದನ್ನೇ ತಿರುಚಿ ಹೇಳುತ್ತಿದೆ. ಸುಳ್ಳು ಹೇಳುವುದೇ ಬಿಜೆಪಿ ಸಿದ್ಧಾಂತ ಎಂದವರು ನುಡಿದರು.
ನಾರಾಯಣ ಗುರು ಸಿದ್ಧಾಂತ ಮತ್ತು ಬಿಜೆಪಿ ಸಿದ್ಧಾಂತಕ್ಕೆ ಸಾಮ್ಯತೆ ಇದೆ ಎಂದಿದ್ದಾರೆ ಆ ನಾಯಕರು. ನಾರಾಯಣ ಗುರು ಚರಿತ್ರೆ ಓದಿದ್ದರೆ ಇವರಿಗೆ ಗೊತ್ತಾಗುತ್ತದೆ ಅವರದು ಸರ್ವಧರ್ಮ ಸಮನ್ವಯದ ಸಿದ್ಧಾಂತ ಎಂಬುದು. ಆದರೆ ಬಿಜೆಪಿಯದು ಮನುಸಿದ್ಧಾಂತದ ಕೋಮುವಾದಿ ತತ್ವವಾಗಿದೆ. ಗುರುಗಳು ಬರುವ ಮೊದಲು ಕೇರಳ ಹೇಗಿತ್ತು? ಬಳಿಕ ಹೇಗಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನಾರಾಯಣ ಗುರು ಸಿದ್ಧಾಂತ ಕೇರಳದಲ್ಲಿ ಗಟ್ಟಿಯಾಗಿ ಇರುವುದರಿಂದಲೇ ಅಲ್ಲಿ ಬಿಜೆಪಿಗೆ ನೆಲೆ ಸಿಕ್ಕಿಲ್ಲ ಎಂದರು.
ನಾರಾಯಣ ಗುರು ಟ್ಯಾಬ್ಲೋ ನಿರಾಕರಣೆಗೊಂಡಾಗ, ನಿನ್ನೆ ಪತ್ರಿಕಾಗೋಷ್ಠಿ ಮಾಡಿದ ನಾಯಕರು ಎಲ್ಲಿದ್ದರು? ಆಗ ನಾನು ಗುರುಗಳ ಪರವಾಗಿ ಪುತ್ತೂರಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದೆ. ಬಿಜೆಪಿ ನಾಯಕರು ಮೊದಲು ಗುರುಗಳ ಚರಿತ್ರೆ ಸರಿಯಾಗಿ ಓದಿಕೊಳ್ಳಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ನಾರಾಯಣ ಗುರು ಜಯಂತಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರಕಾರ ಎಂದರು.
ಜನಾರ್ದನ ಪೂಜಾರಿ ಅವರ ಮೇಲೆ ಅತಿಹೆಚ್ಚು ಅಪಪ್ರಚಾರ ಮಾಡಿದವರು ಬಿಜೆಪಿಯವರು. ಹಿಂದೆ ಪುತ್ತೂರಿನ ಪಡೀಲ್‌ನಲ್ಲಿ ಪೂಜಾರಿ ಅವರ ಮೇಲೆ ನಡೆದ ದಾಳಿಯಲ್ಲಿ ಬಿಜೆಪಿ ಕುಮ್ಮಕ್ಕಿತ್ತು. ಈಗ ಬಿಜೆಪಿ ನಾಯಕರಿಗೆ ಪೂಜಾರಿ ಅವರ ಮೇಲೆ ಹಠಾತ್ ಪ್ರೀತಿ ಉಕ್ಕಿ ಹರಿಯಲು ಕಾರಣವೇನು. ಪೂಜಾರಿ ಅವರು ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಕೆಲ ಹೇಳಿಕೆಗಳ ಹಿಂದೆ ಹರಿಕೃಷ್ಣ ಬಂಟ್ವಾಳ್ ಮತ್ತು ಇತರ ಬಿಜೆಪಿ ನಾಯಕರ ಪಾತ್ರವಿದೆ. ಮಂಗಳವಾರ ಪುತ್ತೂರಿನಲ್ಲಿ ನನ್ನ ವಿರುದ್ಧ ನಡೆದ ಪತ್ರಿಕಾಗೋಷ್ಠಿ ನನ್ನ ರಾಜಕೀಯ ವೈರಿಗಳು ನೀಡಿದ ಸುಪಾರಿಯಾಗಿದೆ ಎಂದು ಆಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೌರೀಸ್ ಮಸ್ಕರೇನಸ್, ಸುರೇಶ್ ಪೂಜಾರಿ, ಬಾತಿಷಾ ಅಳಕೆ ಮಜಲು, ವಿಕ್ಟರ್ ಪಾಯಸ್ ಉಪಸ್ಥಿತರಿದ್ದರು.