ಅಲ್ಪಸಂಖ್ಯಾತರ ಅಭಿವೃದ್ಧಿ ಅನುದಾನಗಳ ಬಳಕೆ  ಪರಿಶೀಲಿಸಿ: ಕೆ. ರಾಜು

ಅಲ್ಪಸಂಖ್ಯಾತರ ಅಭಿವೃದ್ಧಿ ಅನುದಾನಗಳ ಬಳಕೆ ಪರಿಶೀಲಿಸಿ: ಕೆ. ರಾಜು


ಮಂಗಳೂರು: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಯಡಿ ಬಿಡುಗಡೆಯಾಗುವ ಅನುದಾನಗಳು ಸಮರ್ಪಕವಾಗಿ ಬಳಕೆಯಾಗಿರುವ ಬಗ್ಗೆ ಮತ್ತು ಕಾಮಗಾರಿಗಳು ಗುಣಮಟ್ಟದಲ್ಲಿ ಅನುಷ್ಠಾನಗೊಂಡಿರುವ ಬಗ್ಗೆ ನಿಖರವಾಗಿ ಪರಿಶೀಲಿಸುವಂತೆ ಅಪರ ಜಿಲ್ಲಾಧಿಕಾರಿ ಕೆ. ರಾಜು ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ  ನಡೆದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಗಳ ಹೊಸ ೧೫ ಅಂಶಗಳ ಹಾಗೂ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಲ್ಪಸಂಖ್ಯಾತರ ಶೈಕ್ಷಣಿಕ ಹಾಗೂ ಉದ್ಯೋಗ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹಾಗೂ ವಿವಿಧ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇದರ ಫಲಾನುಭವಿಗಳು ವೆಚ್ಚವನ್ನು ಸಮರ್ಪಕವಾಗಿ ಬಳಸುವಂತೆ ನಿಗಾ ವಹಿಸಲು ಅವರು ಸೂಚಿಸಿದರು. ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ವಿವಿಧ ಗ್ರಾಮಸಭೆಗಳಲ್ಲಿ ಮಾಹಿತಿ ನೀಡಬೇಕು. ಫಲಾನುಭವಿಗಳಿಗೆ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತ ಇಲಾಖೆ ಅಧೀನದಲ್ಲಿರುವ  ಶಿಕ್ಷಣ ಸಂಸ್ಥೆಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಲು ಆದ್ಯತೆ ನೀಡಬೇಕು. ಉತ್ತಮ ಫಲಿತಾಂಶ ಬರುವಂತೆ ವಹಿಸಬೇಕು. ಇಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು  ಆಗ್ಗಿಂದಾಗೆ ಪರಿಶೀಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಅವರು ಸೂಚಿಸಿದರು. 

ವಸತಿ ಶಾಲೆ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ  ದಾಖಲಾತಿಗಳನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ 13 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 2,700 ಸೀಟುಗಳಿದ್ದರೂ, ಕೇವಲ 1069 ಸೀಟುಗಳು ಭರ್ತಿಯಾಗಿದೆ. ಅಲ್ಪಸಂಖ್ಯಾತರ ಹಾಸ್ಟೆಲ್ಗಳಲ್ಲಿ ತ್ವರಿತವಾಗಿ ಸೀಟುಗಳನ್ನು ಭರ್ತಿ ಮಾಡಬೇಕು ಎಂದು ತಿಳಿಸಿದರು.

ಕಳೆದ ವರ್ಷ ಜಿಲ್ಲೆಯಲ್ಲಿ 63,102 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 16.18 ಕೋಟಿ ರೂ. ಮೊತ್ತದ ವಿದ್ಯಾರ್ಥಿವೇತನ ಬಿಡುಗಡೆ ಮಾಡಲಾಗಿದ್ದು, ಇನ್ನೂ 13,924 ಮಂದಿಗೆ ಮಂಜೂರಾತಿ ಬಾಕಿ ಇದೆ. ವಿದೇಶಿ ಅಧ್ಯಯನ ವಿದ್ಯಾರ್ಥಿ ವೇತನ ಯೋಜನೆಯಡಿಯಲ್ಲಿ 120 ವಿದ್ಯಾರ್ಥಿಗಳಿಗೆ 11.39 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.  ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಸೆಪ್ಟೆಂಬರ್ 30 ರವರೆಗೆ ಕಾಲಾವಕಾಶ ಇದೆ ಎಂದು ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ 2024-25 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಚರ್ಚ್ ದುರಸ್ತಿ, ಕಂಪೌಂಡ್ ನಿರ್ಮಾಣ, ಸ್ಮಶಾನ ಭೂಮಿ ಅಭಿವೃದ್ಧಿ ಯೋಜನೆಗಳಿಗೆ 86   ಸಂಸ್ಥೆಗಳಿಗೆ 12.82 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜೈನ ಬಸದಿ ಮತ್ತು ಸಮುದಾಯ ಭವನಗಳ ಅಭಿವೃದ್ಧಿಗೆ 21 ಸಂಸ್ಥೆಗಳಿಗೆ 5.52 ಕೋಟಿ ರೂ ಹಾಗೂ ಮದರಸಗಳಿಗೆ ಕಂಪ್ಯೂಟರ್ ಹಾಗೂ ಇನ್ನಿತರ ಸೌಕರ್ಯಕ್ಕಾಗಿ 19 ಸಂಸ್ಥೆಗಳಿಗೆ 95 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ನಗರಾಭಿವೃದ್ಧಿ  ಯೋಜನಾ ನಿರ್ದೇಶಕ ಸಂತೋಷ್ ಕುಮಾರ್,  ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್, ಸಮಿತಿ ಸದಸ್ಯರಾದ ಸುಭಾಷ್ ಚೌಟ, ಮನ್ಸೂರ್ ಆಝಾದ್, ಅಫ್ತ್ತಾಬ್ ಹುಸೇನ್, ಪೀಟರ್, ವಿಸ್ತರಣಾಧಿಕಾರಿ ಮುಹಮ್ಮದ್ ಫಾರೂಕ್ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article