
ಎರಡನೇ ದಿನವೂ ಸಮೀರ್‌ಗೆ ಗ್ರಿಲ್: ಎಐ ವಿಡಿಯೋ ಉತ್ತರಿಸಲು ತಡಕಾಟ.. ಹಣದ ಮೂಲ ಶೋಧನೆ
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕೃತಕ ಬುದ್ಧಿಮತ್ತೆ (ಎಐ) ವಿಡಿಯೋ ಮಾಡಿ ನಿಂದನೆ ಮಾಡಿದ ಯೂಟ್ಯೂಬರ್ ಸಮೀರ್ ಎಂ.ಡಿ. ಯಾನೆ ‘ಧೂತ’ನನ್ನು ಬೆಳ್ತಂಗಡಿ ಪೊಲೀಸರು ಎರಡನೇ ಇಂದು ಸುಮಾರು 4.30 ತಾಸು ವಿಚಾರಣೆ ನಡೆಸಿದ್ದಾರೆ.
ಸಮೀರ್ ಇಂದು ತನ್ನ ವಕೀಲರ ಜೊತೆ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಕಾರಿನಲ್ಲಿ ಪೊಲೀಸ್ ಠಾಣೆಗೆ ಮಧ್ಯಾಹ್ನ 12.30ರ ಸುಮಾರಿಗೆ ಆಗಮಿಸಿದ್ದು ಸಂಜೆ ತನಕ ವಿಚಾರಣೆ ನಡೆದಿದೆ. ವಿಚಾರಣೆಯ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
ತನಿಖಾಧಿಕಾರಿ ನಾಗೇಶ್ ಕದ್ರಿಯವರು ಕೇಳಿದ ಎಐ ವಿಡಿಯೋದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದ್ದಾನೆ. ಎಫ್‌ಎಸ್‌ಎಲ್ ವಿಭಾಗದ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು(ಎಸ್‌ಒಸಿಒ-ಸೋಕೋ ಸೀನ್ ಆಫ್ ಕ್ರೈಂ ಆಫೀಸರ್) ಆಗಮಿಸಿ ಎಐ ವಿಡಿಯೋಗೆ ಸಂಬಂಧಿಸಿದ ಹಲವು ತಾಂತ್ರಿಕ ಸಾಕ್ಷ್ಯಗಳನ್ನು ಸೋಕೋ ತಂಡ ವಶಕ್ಕೆ ಪಡೆದಿದೆ. ಎಐ ವಿಡಿಯೋ ಮಾಡಲು ಸಮೀರ್ ಬಳಸಿದ ತಾಂತ್ರಿಕ ಪರಿಕರಗಳನ್ನು ಬೆಳ್ತಂಗಡಿ ಠಾಣೆಯ ಸುಪರ್ದಿಗೆ ನೀಡಲಾಗಿದೆ.
ಹಣಕಾಸು ಮೂಲ..
ಧರ್ಮಸ್ಥಳ ನಿಂದನೆಗೆ ವಿದೇಶದಿಂದ ಫಂಡಿಂಗ್ ನಡೆದಿದೆ ಎಂಬ ಆರೋಪದ ನಡುವೆ ಸಮೀರ್ ಹಣಕಾಸು ಮೂಲದ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಹಣಕಾಸು ವರ್ಗಾವಣೆ, ಆತನ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯಲಾಗಿದೆ. ಧರ್ಮಸ್ಥಳದ ವಿರುದ್ಧ ಪಿತೂರಿ ಮಾಡಿದವರಿಗೆ ಬೇರೆ ಬೇರೆ ಕಡೆಯಿಂದ ಹಣ ಬಂದಿದೆ. ಇದರ ಹಿಂದೆ ಎಡಪಂಥೀಯರು, ನಿಷೇಧಿತ ಸಂಘಟನೆಗಳು ಇದೆ. ಸಮೀರ್‌ನ ಆರ್ಥಿಕ ವಹಿವಾಟನ್ನು ತನಿಖೆ ಮಾಡುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದೆ.