
ಮೂಡುಬಿದಿರೆ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿ ಮಹಾಸಭೆ-ಲಾಭ 10.42 ಕೋ.ರೂ.: ಸತತ 25ವರ್ಷವೂ 25 ಶೇ. ಡಿವಿಡೆಂಡ್ ಘೋಷಣೆ
ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸೊಸೈಟಿಯು 2024-25ರ ಸಾಲಿನಲ್ಲಿ 57.33 ಕೋಟಿ ರೂ. ಆದಾಯದೊಂದಿಗೆ 10.42 ಕೋಟಿ ರೂ.ಗೂ ಮಿಗಿಲು ಲಾಭ ಗಳಿಸಿದ್ದು ಸದಸ್ಯರಿಗೆ ಸತತ ೨೫ನೇ ವರ್ಷದಲ್ಲೂ 25 ಶೇ. ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.
ಸದಸ್ಯರ ನಂಬಿಕೆ, ವಿಶ್ವಾಸಾರ್ಹತೆಯ ನೆಲೆಯಲ್ಲಿ ಆಡಳಿತ ಮಂಡಳಿ ಹಾಗೂ ಸಿಬಂದಿವರ್ಗದ ಬದ್ಧತೆಯ ಸೇವೆಯಿಂದಾಗಿ `ನಮ್ಮ ಸೊಸೈಟಿ' ಎಂಬ ಅಭಿಮಾನಕ್ಕೆ ಪಾತ್ರವಾಗಿದೆ ಎಂದರು.
ವಿಶೇಷ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಅವರು ಮಾತನಾಡಿ, ಲಾಭದಲ್ಲಿ ೫೦ಶೇ.ಗಿಂತಲೂ ಅಽಕ ಅಂದರೆ 4,50,00,000ಯಷ್ಟನ್ನು ಕ್ಷೇಮನಿಧಿಗಿರಿಸಿದ್ದು 25 ಶೇ.ಯನ್ನು ಸದಸ್ಯರಿಗೆ ಪಾಲು ಮುನಾಫೆಯಾಗಿರಿಸಲಾಗಿದೆ.
12,746 ಸದಸ್ಯರಿರುವ ಸೊಸೈಟಿಯ ಅಧಿಕೃತ ಪಾಲು ಬಂಡವಾಳದ ಮಿತಿಯನ್ನು 30 ಕೋಟಿ ರೂ.ಗೇರಿಸಲು ನಿರ್ಧರಿಸಲಾಗಿದೆ ಎಂದರು.
ಕೇವಲ ಒಮ್ಮೆ 1,000 ರೂ. ನೀಡಿ ವಾರ್ಷಿಕ ಗರಿಷ್ಟ ೨ ಲಕ್ಷಕ್ಕೆ ಅವಕಾಶ ಕಲ್ಪಿಸುವ ಸೊಸೈಟಿಯ `ಕಲ್ಪವೃಕ್ಷ ಆರೋಗ್ಯ ಯೋಜನೆ'ಯಲ್ಲಿ ಘಟಕ ವೆಚ್ಚವನ್ನು ಏರಿಸುವ ಬಗ್ಗೆ ಮತ್ತು ಸ್ವಯಂಪ್ರೇರಿತವಾಗಿ ಸದಸ್ಯರು ಈ ನಿಧಿಗೆ ದೇಣಿಗೆ ನೀಡುವ ಬಗ್ಗೆ, ಆಸ್ಪತ್ರೆಗೇ ಮೊತ್ತ ಪಾವತಿಸುವ ಬಗ್ಗೆ , ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಯೋಜನ ಸಿಗುವ ಬಗ್ಗೆ ಸಲಹೆಗಳು ಸದಸ್ಯರಿಂದ ವ್ಯಕ್ತವಾದವು.
ನಿರ್ದೇಶಕ, ಮಾಜಿ ಸಚಿವ ಕೆ. ಅಭಯಚಂದ್ರ ಅವರು ಮಾತನಾಡಿ, ಸುದೀರ್ಘಕಾಲ ಸೊಸೈಟಿಯ ಅಧ್ಯಕ್ಷರಾಗಿದ್ದ ದಿ. ಅಮರನಾಥ ಶೆಟ್ಟಿ ಅವರೂ ಒಳಗೊಂಡಂತೆ ನಿರ್ದೇಶಕರ ವೈಯಕ್ತಿಕ ರಾಜಕೀಯ ಒಲವುಗಳೇನಿದ್ದರೂ ಸೊಸೈಟಿಯು ರಾಜಕೀಯೇತರ ಶುದ್ಧ ಸಹಕಾರಿ ಸಂಘವಾಗಿ ಪ್ರಗತಿಪಥದಲ್ಲಿ ಸಾಗಿ ಬಂದಿದೆ, ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಸೂಚನೆಯಂತೆ ಸಾಮಾನ್ಯ ತಂತ್ರಜ್ನಾನ ಅವಡಿಸುವ ಬಗ್ಗೆ ಚರ್ಚಿಸಿ ತ್ರಿಮುಖ ಒಪ್ಪಂದದ ಮೂಲಕ ಸೊಸೈಟಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು ನಿರ್ಧರಿಸಲಾಯಿತು.
ಸುದರ್ಶನ ಭಟ್ ಲೆಕ್ಕ ಪರಿಶೋಧನ ವರದಿ, ಲಾಭಾಂಶ ವಿಂಗಡನೆ, ಮಂಜುನಾಥ ಎಸ್. ಇವರು 2024-25ನೇ ಸಾಲಿನ ಬಜೆಟ್‌ಗಿಂತ ಜಾಸ್ತಿ ಖರ್ಚಾದ ಐವೇಜುಗಳ ಮಂಜೂರು, ಸಂತೋಷ್ ನಾಯ್ಕ್ 2025-26ನೇ ಸಾಲಿನ ಬಜೆಟ್ ಮಂಡನೆ ಕಲಾಪ ನಡೆಸಿಕೊಟ್ಟರು.
ಉಪಾಧ್ಯಕ್ಷ ಎಂ. ಗಣೇಶ್ ನಾಯಕ್, ನಿರ್ದೇಶಕರಾದ ಜಾರ್ಜ್ ಮೋನಿಸ್, ಮನೋಜ್ ಶೆಟ್ಟಿ, ಸಿ.ಎಚ್. ಅಬ್ದುಲ್ ಗಫೂರ್, ಎಂ.ಪಿ. ಅಶೋಕ ಕಾಮತ್, ಎಂ. ಜ್ನಾನೇಶ್ವರ ಕಾಳಿಂಗ ಪೈ, ಎಂ. ಪದ್ಮನಾಭ, ಜಯರಾಮ ಕೋಟ್ಯಾನ್, ಪ್ರೇಮಾ ಎಸ್. ಸಾಲಿಯಾನ್, ಅನಿತಾ ಪಿ. ಶೆಟ್ಟಿ, ದಯಾನಂದ ನಾಯ್ಕ ಉಪಸ್ಥಿತರಿದ್ದರು.
ನಿರ್ದೇಶಕ ಜಯರಾಮ ಕೋಟ್ಯಾನ್ ಸ್ವಾಗತಿಸಿ, ಉಪಾಧ್ಯಕ್ಷ ಎಂ. ಗಣೇಶ್ ನಾಯಕ್ ವಂದಿಸಿದರು.