
ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾಗ೯ ಸಂಬಂಧಿಸಿ ಸಭೆ
Tuesday, August 5, 2025
ಮೂಡುಬಿದಿರೆ: ಮುಲ್ಕಿ-ಮೂಡುಬಿದಿರೆ ವ್ಯಾಪ್ತಿಯಲ್ಲಿ ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗಕ್ಕೆ ಸಂಬಂಧಿಸಿ ಸ್ಥಳೀಯರ ಅಹವಾಲುಗಳ ಚರ್ಚಿಸಲು ಶಾಸಕ ಉಮಾನಾಥ ಎ. ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಗ್ರಾಮಸ್ಥರ ಮತ್ತು ಅಧಿಕಾರಿಗಳ ಸಭೆ ಕಿನ್ನಿಗೋಳಿ ಯುಗಪುರುಷದ ಸಭಾಭವನದಲ್ಲಿ ಸೋಮವಾರ ನಡೆಯಿತು.
ಉಡುಪಿ ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗದ ವಿದ್ಯುತ್ ಲೈನ್ ಕಾಮಗಾರಿ ನಡೆಸುವಾಗ, ತೋಟ , ಕೃಷಿ ಕಾರ್ಯ ಸ್ಥಳದ ಯಜಮಾನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗೂ ಸರಿಯಾಗಿ ಪರಿಹಾರ ನೀಡದೆ ಪೊಲೀಸರನ್ನು ಬಳಸಿ, ಹೆದರಿಸಿ ಬೆದರಿಸಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಸಭೆಯಲ್ಲಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕಾಮಗಾರಿ ಪ್ರಾಜೆಕ್ಟ್ ಮೆನೇಜರ್ ವೆಂಕಟೇಶ್ ಸಬೂಬು ಹೇಳಲು ಯತ್ನಿಸಿದಾಗ ಆಕ್ರೋಶಗೊಂಡ ಕೃಷಿಕರು, ಜಾಗದ ಮಾಲೀಕರು ಕಾಮಗಾರಿ, ಪರಿಹಾರ ನೀಡುವ ಬಗ್ಗೆ ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಶಾಸಕ ಕೋಟ್ಯಾನ್ ಮಾತನಾಡಿ, ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿಗೆ ಸ್ಥಳೀಯರ ಯಾವುದೇ ವಿರೋಧ ಇಲ್ಲ, ಆದರೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿ ನಿಯಮಗಳ ಪಾಲನೆ ಮಾಡಿ, ಜಾಗ ಕಳೆದುಕೊಳ್ಳುವವರಿಗೆ ಸರಿಯಾದ ಪರಿಹಾರ ಕಾಮಗಾರಿ ನಡೆಸಬೇಕು. ಜಾಗದ ವ್ಯಾಜ್ಯವಿದ್ದರೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು, ಪೊಲೀಸರನ್ನು ಕರೆಸಿ ಹೆದರಿಸಿ ಬೆದರಿಸಿ ಬಲಾತ್ಕಾರದ ಕಾಮಗಾರಿಗೆ ವಿರೋಧವಿದೆ, ಆಗ ಜನರ ಜೊತೆ ನಾವು ಇರಬೇಕಾಗುತ್ತದೆ ಎಂದು ಕಾಮಗಾರಿ ನಡೆಸುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮಂಗಳೂರು ఎసి ಹರ್ಷವರ್ಧನ, ಮುಲ್ಕಿ ಮೂಡುಬಿದಿರೆ ತಹಶೀಲ್ದಾರ ಶ್ರೀಧರ ಮುಂದಲಮನಿ, ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಕುಸುಮಾಧರ ಮತ್ತಿತರರು ಉಪಸ್ಥಿತರಿದ್ದರು.