ಮೂಡುಬಿದಿರೆ ವಿವಿ ಕಾಲೇಜು: ವಿದ್ಯಾರ್ಥಿ ತರಬೇತಿ ಕಾರ್ಯಾಗಾರ
Wednesday, August 6, 2025
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟ ಮೂಡುಬಿದಿರೆ ಬನ್ನಡ್ಕದ ವಿವಿ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಯಶಸ್ವೀ ಬದುಕಿನ ತರಬೇತಿ ಕಾರ್ಯಾಗಾರ ನಡೆಯಿತು.
ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತಿದಾರ, ಪತ್ರಕತ೯ ರಾಯೀ ರಾಜಕುಮಾರ ಮೂಡುಬಿದಿರೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಯಾವುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ಧೈರ್ಯದಿಂದ, ಜಾಣ್ಮೆಯೊಂದಿಗೆ ಎದುರಿಸಬೇಕು. ಕಲಿಕೆಯ ಸಂದರ್ಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ವೈವಿಧ್ಯಮಯ, ಪ್ರಾಯೋಗಿಕ ಕಲಿಕೆಗೈದು ಪ್ರಾವೀಣ್ಯತೆ ಪಡೆದು ಬೆಳೆಯಬೇಕು. ದಿನನಿತ್ಯದ ಚಿಕ್ಕ ಚಿಕ್ಕ ಸಂಗತಿಗಳ ಸಂಪೂರ್ಣ ಪರಿಜ್ಞಾನವನ್ನು ಬೆಳೆಸಿಕೊಂಡಷ್ಟು, ಪ್ರಶ್ನೆಗೆ ಉತ್ತರಗಳನ್ನು ಕಂಡುಕೊಂಡಷ್ಟೂ, ನಮ್ಮ ಜ್ಞಾನದ ಹರವು ವಿಸ್ತಾರಗೊಳ್ಳುತ್ತಾ ಹೋಗುತ್ತದೆ ಎಂದು ಹಲವಾರು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ. ಅಜಿತ್ ಕುಮಾರ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಪ್ರತಿನಿಧಿ ಉದಯ್ ಮತ್ತು ನಿಖಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೇತನ್ ಸ್ವಾಗತಿಸಿದರು. ಅಕ್ಷತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಸುಕನ್ಯಾ ವಂದಿಸಿದರು.
