ಶಿರ್ತಾಡಿ ಗ್ರಾಮಸಭೆ: ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ
ಶಿರ್ತಾಡಿಯ ಕುಕ್ಕುದಕಟ್ಟೆ, ಪಡುಕೊಣಾಜೆ, ಗುಂಡಾವು ಮೊದಲಾದೆಡೆ ವಿದ್ಯುತ್ ತಂತಿಗಳು ಜೋತಾಡುತ್ತಿರುವುದನ್ನು ಉಮೇಶ್ ನಾಯ್ಕ್ ಸಹಿತ ಗ್ರಾಮಸ್ಥರು ಪ್ರಸ್ತಾಪಿಸಿದಾಗ ಮೆಸ್ಕಾಂ ಬೆಳುವಾಯಿ ಎಸ್.ಓ. ಗೇಮಾ ನಾಯ್ಕ್ ಅವರು ಸ್ಥಳ ಪರಿವೀಕ್ಷಣೆಗೈದು ಕಂಬಗಳ ನಡುವೆ ಹೆಚ್ಚುವರಿ ಕಂಬ ಸ್ಥಾಪಿಸಲು ಕ್ರಮಜರಗಿಸುವುದಾಗಿ ತಿಳಿಸಿದರು.
ಶಿರ್ತಾಡಿಯ ಗ್ರಾಮಸಭೆಗಳಿಗೆ ಸತತ ಮೂರನೇ ಬಾರಿ ಕೃಷಿ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದು, ಇಲ್ಲಿನ ಕೃಷಿಕರ ಸಮಸ್ಯೆ, ಬೇಡಿಕೆಗಳಿಗೆ ಉತ್ತರಿಸುವವರಾರು? ಎಂಬ ಗ್ರಾಮಸ್ಥರು ಪ್ರಶ್ನಿಸಿದರು.
ಪಿಡಿಓ ದಾಮೋದರ ಅವರು ಗ್ರಾಮಸಭೆಯ ನೋಟೀಸನ್ನು ಇತರ ಇಲಾಖೆಗಳಂತೆ ಕೃಷಿ ಅಧಿಕಾರಿಗೂ ಕಳುಹಿಸಲಾಗಿರುವ ದಾಖಲೆಯನ್ನು ನೋಡಲ್ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಿಗಿ ಅವರಿಗೆ ತೋರಿಸಿದರು. ಹೀಗೆ ಗೈರು ಹಾಜರಾಗಿರುವುದಕ್ಕೆ ಸಕಾರಣ ಇದ್ದರೂ ಅದನ್ನು ಪಂಚಾಯತ್‌ಗೆ ತಿಳಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು ಎಂದರು. ಈ ಬಗ್ಗೆ ಮೇಲಧಿಕಾರಿಗಳಿಗೆ ಪಂಚಾಯತ್ ಪತ್ರ ಬರೆಯಿರಿ ಎಂದೂ ಅವರು ಸೂಚಿಸಿದಾಗ ಪಂ. ಸದಸ್ಯರು ನೀವೇ ಅದನ್ನು ಮೇಲಾಕಾರಿಗಳ ಗಮನಕ್ಕೆ ತನ್ನಿ ಎಂದರು.
ಮೆಸ್ಕಾಂ ಸಬ್‌ಸ್ಟೇಶನ್ ಅಂತಿಮ ಹಂತಕ್ಕೆ ಬರುತ್ತಲಿದೆ. ಉಪಗುತ್ತಿಗೆ, ಕೆಲಸ ಕಾರ್ಯಗಳಲ್ಲಿ ತಾಂತ್ರಿಕ ಶಿಕ್ಷಣ ಪಡೆದ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿ ಸದಸ್ಯ ಪ್ರವೀಣ್ ಕುಮಾರ್ ವಿನಂತಿಸಿದರು.
ಮೂಡುಬಿದಿರೆ ಪೊಲೀಸ್ ಠಾಣೆಯ ರವೀಂದ್ರ ಎನ್.ಜಿ. ಮಾತನಾಡಿ, ಈಗೀಗ ಮೊಬೈಲ್ ಲ್ಯಾಪ್‌ಟಾಪ್‌ಗಳಲ್ಲಿ ಬರುವ ಕೊಡುಗೆಗಳಿಗೆ ಮರುಳಾಗಿ ತಮ್ಮ ಬ್ಯಾಂಕ್ ವಿವರಗಳನ್ನು ಅನಧಿಕೃತ ವ್ಯಕ್ತಿಗಳಿಗೆ ನೀಡಿ ಮೋಸ ಹೋಗುವ ಪ್ರಸಂಗಗಳು ನಡೆಯುತ್ತಿರುವುದರ ಬಗ್ಗೆ ಎಚ್ಚರಿಸಿದರು. ಹೀಗೆಲ್ಲ ಬ್ಯಾಂಕಿಂಗ್ ವಿಷಯದಲ್ಲಿ ಹ್ಯಾಕ್ ಆಗಿ ಮೋಸ ಹೋದ ಸಂದರ್ಭದಲ್ಲಿ 24 ತಾಸುಗಳ ಒಳಗಾಗಿ ಸಹಾಯವಾಣಿ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಅಪಾಯದಿಂದ ಪಾರಾಗಬಹುದು. ಅನಾಮಿಕ ಕರೆಗಳಿಗೆ ಸ್ಪಂದಿಸಬೇಡಿ. ಯಾರೊಂದಿಗೂ ಆಧಾರ್ ನಂಬ್ರ, ಓಟಿಪಿ ಹಂಚಿಕೊಳ್ಳಬೇಡಿ ಎಂದು ಅವರು ತಿಳಿಸಿದರು.
‘ಎಐ’ ಮೂಲಕ ಕೇಂದ್ರ ವಿತ್ತ ಸಚಿವರೇ ಮೊದಲಾದವರ ವೀಡಿಯೋ ತಯಾರಿಸಿ, ಇಂತಿಷ್ಟು ಹಣ ಕಟ್ಟಿದರೆ ಮಾಸಿಕ ಸಹಸ್ರಸಹಸ್ರ ರೂ. ವರಮಾನ ನಿಶ್ಚಿಂತೆಯಾಗಿ ಬರುವುದೆಂಬ ಸುಳ್ಳು ಸುದ್ದಿಗೆ ಜನರು ಬಲಿಬೀಳುತ್ತಿದ್ದಾರೆ, 350 ರೂ.ಗೆ 4 ಕೆಜಿ ಡ್ರೈಪ್ರುಟ್ಸ್ ಸಿಗುವುದೆಂಬ ಅಪ್ಪಟ ಮೋಸದ ಆಫರ್‌ಗಳಿಗೆ ಜನರು ಬಲಿಯಾಗುತ್ತಿದ್ದಾರೆ ಎಂದು ಸಭಿಕರೋರ್ವರು ಸಾಂದರ್ಭಿಕವಾಗಿ ಪ್ರಸ್ತಾಪಿಸಿದರು.
ನರೇಗಾ ತಾ. ಸಂಯೋಜಕಿ ಅನ್ವಯ ಮೂಡುಬಿದಿರೆ ಮಾತನಾಡಿ, ನರೇಗಾ ಯೋಜನೆಯಡಿ ವ್ಯಕ್ತಿಗೆ ದಿನಕ್ಕೆ ನೀಡಲಾಗುವ ಕೂಲಿಯ ದರವನ್ನು 370 ರೂ.ಗೆ ಏರಿಸಲಾಗಿದೆ ಎಂದರು. ತೋಟ, ಕೃಷಿ ಹೊಂಡ, ತೆರೆದ ಬಾವಿ ರಚನೆ, ದನ, ಕೋಳಿ, ಆಡು, ಹಂದಿ ಸಾಕಣೆಗೆ ಶೆಡ್ ನಿರ್ಮಾಣ ಮೊದಲಾದ ಕಾಮಗಾರಿಗಳಿಗೆ ಅವಕಾಶವಿದೆ ಎಂದು ವಿವರಿಸಿದರು.
ಇನ್ನೂ ಸಿಗದ ಪರಿಹಾರ:
ಕಳೆದ ವರ್ಷದಲ್ಲಿ ಮಳೆಹಾನಿಗೊಳಗಾದ ಕೆಲವು ಮನೆಗಳಿಗೆ ಹಂತ ಹಂತವಾಗಿ ಪರಿಹಾರ ಧನ ಸಿಗುವುದೆಂದು ಹೇಳಲಾಗಿದ್ದರೂ ಇನ್ನೂ ಹಲವರಿಗೆ ಸಿಕ್ಕಿಲ್ಲ ಎಂದು ಸಂತೋಷ್ ಕೋಟ್ಯಾನ್ ಹೇಳಿದರು. ಇದಕ್ಕೆ ಉತ್ತರಿಸಿದ ಗ್ರಾಮ ಆಡಳಿತಾಧಿಕಾರಿ ಎಸ್. ಮಹೇಶ್ ಅವರು 16ಶೇ. ಕ್ಕಿಂತ ಹೆಚ್ಚು ಹಾನಿ ಆಗಿದ್ದಲ್ಲಿ ಪರಿಹಾರ ತಕ್ಷಣ ಲಭಿಸುವ ಅವಕಾಶವಿದೆ ಎಂದರು.
ಎಂಡೋ ಸಲಾನ್ ಪೀಡಿತರನ್ನು ಇತರ ಸಾಮಾನ್ಯ ವಿಕಲಚೇತನರ ಪಟ್ಟಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಶಿರ್ತಾಡಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಭರತ್ ಸ್ಪಷ್ಟನೆ ನೀಡಿದರು.
ಪಡುಕೊಣಾಜೆಗೆ ಗೋಶಾಲೆ ಮಂಜೂರಾಗಿದೆ ಎಂದು ಶಿರ್ತಾಡಿಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮಹೇಶ್ ತಿಳಿಸಿದರು.
ಪಂ. ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಸರಕಾರಿ ಶಾಲೆಗಳನ್ನು ಸುಸ್ಥಿತಿಯಲ್ಲಿರಿಸುವ ಜತೆಗೆ ಮಕ್ಕಳ ಅನುಕೂಲಕ್ಕೆ ಬಸ್ ಸೌಕರ್ಯ ಒದಗಿಸಬೇಕು ಎಂದು ಕೋರಿದರು.
ಶಿಕ್ಷಣ ಸಂಯೋಜಕ ರಾಜೇಶ್ ಭಟ್, ಗಸ್ತು ಅರಣ್ಯ ಪಾಲಕ ಮಂಜುನಾಥ ಎಂ., ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ ಪೈ. ಮೊದಲಾದ ಅಧಿಕಾರಿಗಳಿದ್ದರು. ಪಂಚಾಯತ್ ಮಾಜಿ ಅಧ್ಯಕ್ಷೆ ಲತಾ ಹೆಗ್ಡೆ, ಸಂತೋಷ್ ಶೆಟ್ಟಿ, ದಿನೇಶ್ ಶೆಟ್ಟಿ ತಿಮಾರ್, ಶೀನ, ಸಂತೋಷ್ ಅಂಚನ್, ದೇವಕಿ, ಸುರೇಖಾ, ನಾಗವೇಣಿ, ಶಶಿಕಲಾ ಮೊದಲಾದ ಸದಸ್ಯರು ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು. ಗ್ರಂಥಪಾಲಕ ಜಗದೀಶ ಭಟ್ ಸ್ವಾಗತಿಸಿ, ನಿರೂಪಿಸಿದರು.