
ಬನ್ನಡ್ಕ ರಾಘವೇಂದ್ರ ಮಠದಲ್ಲಿ ಆರಾಧನ ಮಹೋತ್ಸವ
Monday, August 11, 2025
ಮೂಡುಬಿದಿರೆ: ಮುರಂತಕೋಡಿ ಸುಬ್ರಾಯ ಭಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಬನ್ನಡ್ಕ ಶ್ರೀಗುರು ರಾಘವೇಂದ್ರ ಮಠದಲ್ಲಿ ಆರಾಧನ ಮಹೋತ್ಸವದಂಗವಾಗಿ ಸೋಮವಾರ ಮಧ್ಯಾರಾಧನೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಭಾನುವಾರ ಪೂರ್ವಾರಾಧನೆಯೊಂದಿಗೆ ಆರಾಧನ ಮಹೋತ್ಸವ ಪ್ರಾರಂಭಗೊoಡಿದ್ದು, ವಿವಿಧ ವೈದಿಕ ಕಾರ್ಯಕ್ರಮಗಳು, ಶ್ರೀ ರಾಘವೇಂದ್ರ ಕುಣಿತಾ ಭಜನಾ ಮಂಡಳಿಯಿಂದ ಕುಣಿತ ಭಜನೆ, ಶ್ರೀ ರಾಘವೇಂದ್ರ ಕುಣಿತಾ ಭಜನಾ ಮಂಡಳಿಯಿಂದ ಭಕ್ತಿ ಭಜನೆ, ಶ್ರೀ ಕಟೀಲು ದುರ್ಗಾ ಮಕ್ಕಳ ಮೇಳದಿಂದ ಸುದರ್ಶನ ವಿಜಯ ಯಕ್ಷಗಾನ, ರಂಗಪೂಜೆ, ಮಹಾಪೂಜೆ, ಪಲ್ಲಕ್ಕಿ ಉತ್ಸವ ನಡೆಯಿತು. ಸೋಮವಾರ ಡಾ.ರಕ್ಷಾ ಭಟ್ ವೇಣೂರು ಅವರಿಂದ ವೀಣಾ ವಾದನ, ಶ್ರೀ ವೆಂಕಟರಮಣ ಭಜನಾ ಮಂಡಳಿಯಿಂದ ಭಕ್ತಿ ಭಜನೆ ಜರುಗಿತು.
ಮಠದ ಮೊಕ್ತೇಸರರಾದ ಮುರಂತಕೋಡಿ ವಾಸುದೇವ ಭಟ್, ಗೋವಿಂದ ಭಟ್, ಟ್ರಸ್ಟ್ನ ವ್ಯವಸ್ಥಾಪಕ ನರಸಿಂಹ ತಂತ್ರಿ, ಕಾರ್ಯದರ್ಶಿ ಎನ್.ಎನ್ ರಾವ್ ಉಪಸ್ಥಿತರಿದ್ದರು.
ಅ.12ರಂದು ಉತ್ತರಾರಾಧನೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು, ಸುಧಾ ಬಳಗ ಕಟೀಲು ಅವರಿಂದ ಭಕ್ತಿ ಭಜನೆ ನಡೆಯಲಿದೆ.