ಸ್ವಾತಂತ್ರ್ಯೋತ್ಸವದ ಸಂದರ್ಭ ರಾಜ್ಯಾದ್ಯಂತ 10,844 ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ
ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಕೃಪೆಯಿಂದ ಬೆಳೆದು ಬಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಕಟಿಬದ್ಧವಾಗಿದೆ.
ಈ ಸಂಬಂಧ ಯೋಜನೆಯ ಕಾರ್ಯಕ್ರಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಯೋಜನೆಯ ಪಾಲುದಾರರೆಲ್ಲರೂ ಸ್ವಚ್ಛತೆಯ ಬಗ್ಗೆ ಅಭಿಮಾನವುಳ್ಳವರಾಗಿದ್ದಾರೆ. ಧಾರ್ಮಿಕ ಕೇಂದ್ರಗಳು ಮನುಕುಲಕ್ಕೆ ಬದುಕುವ ರೀತಿಯನ್ನು ತಿಳಿಸುವ ಕೇಂದ್ರಗಳೂ ಆಗಿವೆ. ಸ್ವಚ್ಛತೆಯ ಪರಿಕಲ್ಪನೆ ಇಲ್ಲಿಂದ ಆರಂಭಗೊಂಡರೆ ರಾಜ್ಯದ ಪ್ರತಿ ಮನೆಯಲ್ಲಿಯೂ ಜಾಗೃತಿ ಮೂಡಿಸಬಹುದೆಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ‘ಸ್ವಚ್ಛ ಶ್ರದ್ಧಾ ಕೇಂದ್ರ’ ಎಂಬ ಪರಿಕಲ್ಪನೆಗೆ ಚಾಲನೆ ನೀಡಿದರು.
ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ಶ್ರದ್ಧಾ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮುಂದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜನ ಸಹಭಾಗಿತ್ವದ ಈ ಕಲ್ಪನೆ ಸಾಮಾನ್ಯರಲ್ಲಿ ಬಹಳಷ್ಟು ಉತ್ಸಾಹವನ್ನು ಮೂಡಿಸಿದೆ. ಕಳೆದ ೯ ವರ್ಷಗಳಿಂದ ಎರಡು ಬಾರಿ ‘ಮಕರ ಸಂಕ್ರಮಣ’ ಹಾಗೂ ‘ಸ್ವಾತಂತ್ರ್ಯೋತ್ಸವ’ದ ವಿಶೇಷ ಸಂದರ್ಭಗಳಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ‘ನಮ್ಮೂರು ನಮ್ಮ ಶ್ರದ್ಧಾಕೇಂದ್ರ’ ಎಂಬ ಧ್ಯೇಯ ವಾಕ್ಯದಡಿ ಹಮ್ಮಿಕೊಂಡು ಸಾಮುದಾಯಿಕ ಸ್ವಚ್ಛತಾ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಧಾರ್ಮಿಕ ಶ್ರದ್ಧಾ ಕೇಂದ್ರಗಳು ಗ್ರಾಮಗಳ ಪ್ರಮುಖ ಭಾಗವಾಗಿದ್ದು, ಇವುಗಳನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಪರಿಸರ ಸ್ವಚ್ಛತಾ ಮನೋಭಾವವು ಸಾರ್ವತ್ರಿಕವಾಗುತ್ತದೆ. ಸಾಮಾನ್ಯ ಜನರು ಶ್ರದ್ಧಾ ಕೇಂದ್ರಗಳ ಕುರಿತು ಪವಿತ್ರ ಭಾವನೆಗಳನ್ನಿಟ್ಟುಕೊಂಡಿದ್ದರೂ, ದೇವಳಗಳ ಸುತ್ತಮುತ್ತ ಮಲಿನವಾಗಿರುವುದನ್ನು ಕಾಣುತ್ತೇವೆ. ದೇವಳದ ಗರ್ಭಗುಡಿಯಲ್ಲಿ, ಹೊರಗಿನ ಪ್ರಾಂಗಣದಲ್ಲಿ ಸ್ವಚ್ಛತೆ ಸಂತೋಷವನ್ನು ತರುತ್ತದೆ. ದೇವಳಗಳು ವಿಶಾಲವಾಗಿದ್ದಲ್ಲಿ, ಇವುಗಳನ್ನು ಸ್ವಚ್ಛಗೊಳಿಸಲು ಜನಸಹಭಾಗಿತ್ವದ ಅವಶ್ಯಕತೆಯೂ ಇರುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಜನಸಹಭಾಗಿತ್ವದಲ್ಲಿ ಶ್ರದ್ಧಾ ಕೇಂದ್ರಗಳ ಬೃಹತ್ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ.
ರಾಜ್ಯದಾದ್ಯಂತ 10844 ಶ್ರದ್ಧಾಕೇಂದ್ರಗಳನ್ನು ಗುರುತಿಸಲಾಗಿದ್ದು, ಸುಮಾರು 2,72,235 ಸ್ವಯಂ ಸೇವಕರು, ದೇವಾಲಯದ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆಯ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಮಪಂಚಾಯತ್ನ ಸದಸ್ಯರು ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿ ರಾಜ್ಯಾದಾದ್ಯಂತ ನಡೆಯುವ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.