ಮೆದುಳು ನಿಷ್ಕ್ರಿಯೆಗೊಂಡ ವ್ಯಕ್ತಿಯ ಅಂಗಾಂಗ ದಾನ: ಸಾವಿನಲ್ಲಿ ಸಾರ್ಥಕತೆ ಮೆರೆದ ಅಂಕೋಲಾ ನಿವಾಸಿ

ಮೆದುಳು ನಿಷ್ಕ್ರಿಯೆಗೊಂಡ ವ್ಯಕ್ತಿಯ ಅಂಗಾಂಗ ದಾನ: ಸಾವಿನಲ್ಲಿ ಸಾರ್ಥಕತೆ ಮೆರೆದ ಅಂಕೋಲಾ ನಿವಾಸಿ


ಉಳ್ಳಾಲ: ಮೆದುಳು ನಿಷ್ಕ್ರಿಯೆಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಡಿದ ವ್ಯಕ್ತಿಯ ಸಾವಿನಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ.

ಅಂಕೋಲಾದ ಮಾಲ್ಗಾಂ ನಿವಾಸಿ ದಿ. ಸುಬ್ರಾಯ ವೆಂಕಟರಾಮ್ ಭಟ್ (49) ಎಂಬವರ ಅಂಗಾಂಗಗಳನ್ನು ದಾನ ಮಾಡಲಾಗಿದೆ. ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯಲ್ಲಿ ದಾನ ಪ್ರಕ್ರಿಯೆಗಳು ನಡೆದಿದೆ.

ಸುಬ್ರಾಯ ವೆಂಕಟರಾಮ್ ಭಟ್ ಅವರು ಮೆದುಳಿನ ರಕ್ತಸ್ರಾವದಿಂದಾಗಿ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.24 ರಂದು ಆಸ್ಪತ್ರೆ ವೈದ್ಯರು ಬ್ರೈನ್ ಡೆತ್ ಘೋಷಿಸಿದ್ದರು. ಈ ಕುರಿತು ಕುಟುಂಬಸ್ಥರು ವೆಂಕಟರಾಮ್ ಭಟ್ ಅವರ ಸಾವಿನಲ್ಲಿ ಸಾರ್ಥಕತೆ ಮೆರೆಯಬೇಕೆಂಬ ಸದುದ್ದೇಶದೊಂದಿಗೆ ಎಲ್ಲಾ ಅಂಗಾಂಗಳನ್ನು ದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಶೆಟ್ಟಿ, ಚಿಕಿತ್ಸೆ ನೀಡಿದ ಡಾ. ಸುಧೀಂದ್ರ ಯು, ಡಾ. ಸುರೇಶ್ ಜಿ, ಹಾಗೂ ಕಸಿ ಸಂಯೋಜಕಿ ಅಕ್ಷತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಜೀವಸಾರ್ಥಕ ತಂಡ ಮತ್ತು ವಿವಿಧ ತಜ್ಞರ ಸಹಕಾರದಿಂದ ಅಂಗಾಂಗ ಬೇರ್ಪಡಿಸುವ ಕಾರ್ಯ ನಡೆಯಿತು.

ಎರಡು ಮೂತ್ರಪಿಂಡಗಳು ಮತ್ತು ಕಣ್ಣುಗಳನ್ನು ಹೊರತೆಗೆದು ಕಸಿ ಮಾಡಲು ಕ್ರಮ ಕೈಗೊಳ್ಳಲಾಯಿತು. ಒಂದು ಮೂತ್ರಪಿಂಡವನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಕಸಿ ಮಾಡಲು ಯೋಜಿಸಲಾಗಿದ್ದರೂ ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಎರಡು ಮೂತ್ರಪಿಂಡಗಳನ್ನು ಎ.ಜೆ. ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಕೆಎಂಸಿ ಮಂಗಳೂರಿಗೆ ಒದಗಿಸಲಾಯಿತು. ಕಣ್ಣುಗಳನ್ನು ಸಂರಕ್ಷಿಸಿ ಅಗತ್ಯ ಫಲಾನುಭವಿಗಳಿಗೆ ನೀಡಲು ವ್ಯವಸ್ಥೆ ಮಾಡಲಾಯಿತು. ಇದಲ್ಲದೆ ಮೂಳೆಗಳು ಹಾಗೂ ಸ್ನಾಯುರಜ್ಜುಗಳನ್ನು (ಫೀಮರ್, ಹೂಮರಸ್ ಹಾಗೂ ಅಚಿಲ್ಲೀಸ್ ಟೆಂಡನ್) ದಾನ ಮಾಡಲಾಯಿತು. ಇವುಗಳನ್ನು ಪ್ರೊ. ಎಂ. ಶಾಂತಾರಾಮ್ ಶೆಟ್ಟಿ ಟಿಶೂ ಬ್ಯಾಂಕ್‌ನಲ್ಲಿ ಸಂಗ್ರಹಿಸಲಾಗಿದೆ.

ರಾಜ್ಯದಲ್ಲಿ ಇದು ಎರಡನೇ ಬಾರಿಗೆ ಶವದ ಮೂಳೆ ಕೊಯ್ಯುವ ಪ್ರಕ್ರಿಯೆ ನಡೆದಿರುವುದು. ಮೊದಲ ಬಾರಿಗೆ ಕ್ಷೇಮ ಆಸ್ಪತ್ರೆಯಲ್ಲಿ ಡಾ.ವಿಕ್ರಮ್ ಶೆಟ್ಟಿ ನೇತೃತ್ವ ತಂಡ ಡಿಸೆಂಬರ್ 2024ರಲ್ಲಿ ನಡೆಸಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article