ಸಂಗಮತಾಣದ ಪರಿಸರದಲ್ಲಿ ಬೀಡುಬಿಟ್ಟ ‘ಗಜರಾಜಟೀಮ್’

ಸಂಗಮತಾಣದ ಪರಿಸರದಲ್ಲಿ ಬೀಡುಬಿಟ್ಟ ‘ಗಜರಾಜಟೀಮ್’


ಪುತ್ತೂರು: ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ದಕ್ಷಿಣಕಾಶಿ ಎಂದೇ ಹೆಸರಾದ ಸಂಗಮ ತಾಣದಲ್ಲಿ ಕಳೆದ 3 ದಿನಗಳಿಂದ ‘ಗಜರಾಜ’ನ ಟೀಮ್ ಬೀಡುಬಿಟ್ಟಿದೆ. ಉಪ್ಪಿನಂಗಡಿಯ ನೆಕ್ಕಿಲಾಡಿ ಗ್ರಾಮದ ದರ್ಭೆ ನಿಗರ್‌ಗುಂಡಿ ಎಂಬಲ್ಲಿ ಶುಕ್ರವಾರ ಕುಮಾರಾಧಾರ ನದಿಯಲ್ಲಿ ಕಾಣಿಸಿಕೊಂಡ 2 ಕಾಡಾನೆಗಳು ನೇತ್ರಾವತಿ ಹಾಗೂ ಕುಮಾರಧಾರ ನದಿಯಲ್ಲಿಯೇ ಪ್ರತೀ ದಿನ ಕಾಣಿಸಿಕೊಳ್ಳುತ್ತಿವೆ. ಶನಿವಾರ ಮಧ್ಯಾಹ್ನದ ಸಮಯದಲ್ಲಿ ಬಿಳಿಯೂರು ಪರಿಸರದ ನೇತ್ರಾವತಿ ನದೀ ತೀರದಲ್ಲಿ ಮತ್ತೆ ಕಾಣಿಸಿಕೊಂಡಿವೆ. ಒಂದಷ್ಟು ಕಾಲ ನದಿಯಲ್ಲಿಯೇ ಇದ್ದ ಈ ಎರಡು ಕಾಡಾನೆಗಳು ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದತ್ತ ದೌಡಾಯಿಸಿದ್ದು, ಬಳಿಕ ಸುರ್ಯ ಕಾಡಿನೊಳಗೆ ಪ್ರವೇಶ ಮಾಡಿದ್ದವು. 

ಆದರೆ ಭಾನುವಾರ ಮತ್ತೆ ಕೂಟೇಲು ಪ್ರದೇಶದಲ್ಲಿನ ನೇತ್ರಾವತಿ ನದಿಯಲ್ಲಿ ಕಾಣಿಸಿಕೊಂಡಿವೆ. ಬೆಳಿಗ್ಗಿನಿಂದ ಸಂಜೆ ತನಕವೂ ಇದೇ ಭಾಗದಲ್ಲಿ ನದೀ ನೀರಿನಲ್ಲಿಯೇ ಕಾಡಾನೆಗಳು ಅತ್ತಿಂದಿತ್ತ ಹೋಗುತ್ತಿದ್ದು, ಈ ಭಾಗದ ಜನತೆಯಲ್ಲಿ ಆತಂಕ ಸೃಷ್ಟಿಸಿವೆ. 

ಒಂದು ಗಂಡಾನೆ ಮತ್ತೊಂದು ಹೆಣ್ಣಾನೆ ಎಂದು ತಿಳಿದುಬಂದಿದ್ದು, ನದಿಯಿಂದ ಕಾಡಾನೆಗಳನ್ನು ಕಾಡಿನತ್ತ ಓಡಿಸಲು ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಈ ಎರಡೂ ಆನೆಗಳು ಯಾವುದೇ ಸಮಸ್ಯೆ ಮಾಡದೆ ನದೀ ನೀರಲ್ಲಿಯೇ ಉಳಿದಿವೆ. ಕಾಡಾನೆಗಳನ್ನು ಕಾಣಲು ಜನರು ತಂಡೋಪತಂಡವಾಗಿ ಈ ಪ್ರದೇಶಕ್ಕೆ ಬರುತ್ತಿದ್ದು, ಜನಸಂದಣಿಯನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. 

ಪುತ್ತೂರು ವಲಯ ಅರಣ್ಯಾಧಿಕಾರಿ ಕಾಂತರಾಜು ಪ್ರಕಾರ ಗಂಡು ಮತ್ತು ಹೆಣ್ಣು ಕಾಡಾನೆಗಳು ಶಾಂತಿಗೋಡು ಪರಿಸರದಲ್ಲಿ ಕಾಣಿಸಿಕೊಂಡಿದ್ದು, ಬಳಿಕ ಕಠಾರ ಭಾಗದ ಮೂಲಕ ನೆಕ್ಕಲಾಡಿಗೆ ಬಂದಿವೆ. ಶುಕ್ರವಾರ ತಡರಾತ್ರಿ ತನಕ ಕುಮಾರಾಧಾರ ನದಿಯಲ್ಲಿದ್ದು ಬಳಿಕ ಕೊಳಕೆ ರಸ್ತೆಯಾಗಿ ಪಯಣಿಸಿವೆ. ಆದರ್ಶನಗರದಲ್ಲಿ ಪುತ್ತೂರು ಉಪ್ಪಿನಂಗಡಿ ರಸ್ತೆಯನ್ನು ದಾಟಿ ತೋಟಗಳ ಮೂಲಕ ಬೋಳ್ಳಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಬಿಳಿಯೂರು ಭಾಗದಲ್ಲಿ ಸಂಚರಿಸಿವೆ. ಆ ಬಳಿಕ ಸುರ್ಯ ಕಾಡಿನೊಳಗೆ ಪ್ರವೇಶ ಮಾಡಿವೆ. ತಮ್ಮ ಹಸಿವು ನೀಗಲು ಬೊಳ್ಳಾರು ಭಾಗದಲ್ಲಿ ಬಾಳೆಗಿಡಗಳನ್ನು ತಿಂದಿರುವುದನ್ನು ಬಿಟ್ಟರೆ ಬೇರೆ ಯಾವುದೇ ಹಾನಿ ಮಾಡಿಲ್ಲ. 

ಕಾಡಿನೊಳಗೆ ಪ್ರವೇಶ ಮಾಡಿರುವ ಈ ಕಾಡಾನೆಗಳು ಮತ್ತೆ ನೇತ್ರಾವತಿ ನದಿಗೆ ಬಂದಿರುವುದು ಕೂಟೇಲು ಪರಿಸರದ ಜನತೆಯಲ್ಲಿ ಭಯ ಹುಟ್ಟಿಸಿದೆ. ಈ ವರ್ಷದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಕಾಡಾನೆ ಧಾಳಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಕೊಳ್ತಿಗೆ ಪ್ರದೇಶದಲ್ಲಿ ರಬ್ಬರ್ ಹಾಲು ಸಂಗ್ರಮ ಮಾಡುತ್ತಿದ್ದ ವೃದ್ದೆ ಹಾಗೂ ಕೊಕ್ಕಡದ ಸೌತೆಡ್ಕ ಪರಿಸರದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಇದೀಗ ಕಾಡಾನೆಗಳು ಉಪ್ಪಿನಂಗಡಿ ಪರಿಸರದಲ್ಲಿಯೇ ಕಾಣಿಸಿಕೊಂಡಿದ್ದು, ನೇತ್ರಾವತಿ ನದಿಯಲ್ಲಿಯೇ ಸಂಚರಿಸಿದರೆ ಒಂದು ಭಾಗದಿಂದ ಬಿಳಿಯೂರು ಪೆರ್ನೆ ಇನ್ನೊಂದು ಭಾಗದಿಂದ ಪಂಜಾಳ ಬೆದ್ರೋಡಿ ಬಜತ್ತೂರು ಭಾಗದ ರೈತವರ್ಗದ ಪ್ರದೇಶಗಳಿವೆ. ಕಾಡಾನೆಗಳ ಪಯಣ ಈ ಭಾಗಕ್ಕೆ ಬರುವ ಸಾಧ್ಯತೆಯ ಹಿನ್ನಲೆಯಲ್ಲಿ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ.

ಕೂಟೇಲು ಭಾಗದಲ್ಲಿ ನೇತ್ರಾವತಿಯಲ್ಲಿಯೇ ನಿಂತಿರುವ ಕಾಡಾನೆಗಳನ್ನು ಮತ್ತೆ ಕಾಡಿನತ್ತ ಓಡಿಸಲು ಪ್ರಯತ್ನ ನಡೆಸಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹಲವು ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ಆನೆಗಳನ್ನು ಓಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ, ಕಾಡಾನೆಗಳನ್ನು ಓಡಿಸಲು ಅಧಿಕಾರಿಗಳಿಂದ ನಿರಂತರ ಪ್ರಯತ್ನ ಸಾಗಿದೆ. ಶೀರಾಡಿ ಕಾಡಿನತ್ತ ಆನೆಗಳನ್ನು ಓಡಿಸುವ ಪ್ರಯತ್ನ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಡೆಯುತ್ತಿದ್ದು, ಈಗಾಗಲೇ ಸುಡುಮದ್ದು ಪ್ರಯೋಗಿಸುವ ಮೂಲಕ ಪಂಜಾಳ ತನಕ ಆನೆಗಳನ್ನು ನೇತ್ರಾವತಿ ನದಿಯಲ್ಲಿ ಅಟ್ಟಿಸಿಕೊಂಡು ಹೋಗಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article