
ಅದ್ದೂರಿಯ ಜಕ್ರಿಬೆಟ್ಟು ಗಣೇಶನ ಶೋಭಾಯಾತ್ರೆ, ಐದು ದಿನಗಳ ‘ಬಂಟ್ವಾಳ ಹಬ್ಬ’ಕ್ಕೆ ತೆರೆ
ಐದು ದಿನಗಳ ಕಾಲ ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಲ್ಲಾ ವರ್ಗದ ಜನರ ಕೂಡುವಿಕೆಯಲ್ಲಿ ‘ಬಂಟ್ವಾಳ ಹಬ್ಬ’ವಾಗಿ ಆಚರಿಸಲ್ಪಟ್ಟಿತು.
ಶ್ರೀ ಗಣೇಶನ ಮೆರವಣಿಗೆಯು ಜಕ್ರಿಬೆಟ್ಟುವಿನಿಂದ ನೇರವಾಗಿ ಬಂಟ್ವಾಳ ಬೈಪಾಸ್ ಜಂಕ್ಷನ್‌ವರೆಗೆ ಸಾಗಿ ಬಂದು, ಅಲ್ಲಿಂದ ಎಡಕ್ಕೆ ತಿರುಗಿ ಬಂಟ್ವಾಳ ಪೇಟೆಯನ್ನು ಪ್ರವೇಶಿಸಿ ತ್ಯಾಗರಾಜರಸ್ತೆಯ ಮೂಲಕ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಮುಂಭಾಗದಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ತಡರಾತ್ರಿವರೆಗೂ ವೈಭವಯುತವಾಗಿ ಮತ್ತು ಭಕ್ತ ಸಮೂಹ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದ ಜಕ್ರಿಬೆಟ್ಟು ಶ್ರೀಗಣೇಶೋತ್ಸವದ ಶೋಭಾಯಾತ್ರೆ ಪೊಲೀಸರ ಸೂಚನೆಯ ಹಿನ್ನಲೆಯಲ್ಲಿ ಇದೇ ಮೊದಲಬಾರಿಗೆ ಕತ್ತಲಾಗುತಿದ್ದಂತೆ ಆರಂಭಗೊಂಡಿತ್ತು.
ಗಣೇಶೋತ್ಸವದ ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿವರೆಗೂ ನಿರಂತರವಾಗಿ ನಡೆಯುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ. ವಿಗ್ರಹ ರಚನೆಗಾರ ಬಿ. ಸದಾಶಿವ ಶೆಣೈ ಮತ್ತವರ ಬಳಗ ಶ್ರೀಗಣೇಶನ ವಿಗ್ರಹಕ್ಜೆ ಹೂವಿನಾಲಂಕಾರದ ಅಂತಿಮ ಸ್ಪರ್ಶ ನೀಡಿದರು. ವೇ.ಮೂ. ಸುದರ್ಶನ್ ಬಲ್ಲಾಳ್ ಪೌರೋಹಿತ್ಯ ನೆರವೇರಿಸಿದರು.
ಸಮಿತಿಯ ಗೌರಾವಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ, ಅಧ್ಯಕ್ಷ ಪದ್ಮಶೇಖರ ಜೈನ್,ಪದಾಧಿಕಾರಿಗಳಾದ ರಾಜೀವ ಶೆಟ್ಟಿ ಎಡ್ತೂರು, ಚಂದ್ರಪ್ರಕಾಶ್ ಶೆಟ್ಟಿ,ಬೇಬಿಕುಂದರ್, ಮಹಾಬಲ ಬಂಗೇರ, ಪ್ರಕಾಶ್ ಜೈನ್ ಪಂಜಿಕಲ್ಲು, ಸುದೀಪ್ ಕುಮಾರ್ ಶೆಟ್ಟಿ, ಪಿ. ಪ್ರವೀಣ್ ಕಿಣಿ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಆರ್. ಅಂಚನ್, ದೇವಪ್ಪ ಕುಲಾಲ್, ವೆಂಕಪ್ಪ ಪೂಜಾರಿ ಬಂಟ್ವಾಳ ಮೊದಲಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ಅಲ್ಲಲ್ಲಿ ಸುಡುಮದ್ದಿನ ಪ್ರದರ್ಶನವು ನಡೆಯಿತು. ಸಾವಿರಾರು ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.