ಕಟ್ಟಡದ ಮೇಲಿಂದ ಕಬ್ಬಿಣದ ರಾಡ್ ಬಿದ್ದು ಕಾರಿನ ಗಾಜು ಪುಡಿ
ಬಂಟ್ವಾಳ: ಕ್ಲಿನಿಕ್ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರೊಂದರ ಮೇಲೆ ಕಟ್ಟಡದ ಮೇಲಿನಿಂದ ಕಬ್ಬಿಣದ ರಾಡ್ ಬಿದ್ದು ಕಾರಿನ ಗಾಜು ಪುಡಿಯಾದ ಘಟನೆ ಬಿ.ಸಿ. ರೋಡಿನಲ್ಲಿ ಸೋಮವಾರ ನಡೆದಿದೆ.
ಡಾ. ಸಂದೇಶ್ ಶೆಟ್ಟಿ ಅವರ ಕಾರಿನ ಮುಂಭಾಗದ ಗಾಜಿನ ಮೇಲೆ ಕಬ್ಬಿಣದ ರಾಡ್ ಬಿದ್ದು ಗಾಜು ಪುಡಿಪುಡಿಯಾಗಿದೆ.
ಬಿ.ಸಿ. ರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕಟ್ಟಡದ ಮೇಲಿನ ಅಂತಸ್ತಿನ ಸ್ಲ್ಯಾಬ್‌ನಿಂದ ಕಬ್ಬಿಣದ ರಾಡ್ ಕಾಂಪ್ಲೆಕ್ಸ್‌ನ ಎದುರುಗಡೆ ಪಾಕ್೯ ಮಾಡಿದ ಕಾರಿನ ಮುಂಭಾಗದ ಗಾಜಿನ ಮೇಲೆ ಬಿದ್ದು ಪುಡಿಯಾಗಿದೆ.
ಅದೃಷ್ಟವಶಾತ್ ಕಾರಿನಲ್ಲಿ ಯಾರು ಇಲ್ಲದಿರುವುದರಿಂದ ಅಪಾಯ ಸಂಭವಿಸಿಲ್ಲ. ಈ ಕಟ್ಟಡದ ಮುಂಭಾಗ ನಿತ್ಯವು ನೂರಾರು ಮಂದಿ ನಡೆದಾಡುತ್ತಿದ್ದಲ್ಲದೆ ಅಂಗಡಿ ಮುಂಗಟ್ಡುಗಳಿರುವುದರಿಂದ ಸಾಕಷ್ಟು ವಾಹನಗಳು ಕೂಡ ನಿಲುಗಡೆಯಾಗುತ್ತದೆ.
ಕಬ್ಬಿಣದ ರಾಡ್ ಕಾರಿನ ಮೇಲೆ ಬಿದ್ದಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.