ಜನಾಗ್ರಹ ಸಭೆಗೆ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಚಾಲನೆ
ಬಳಿಕ ಅವರು ಮಾತನಾಡಿ, ಸಮಾಜದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಎಲ್ಲರೂ ಒಗ್ಗಟ್ಟಾಗಬೇಕು. ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರ ಮತ್ತು ದಬ್ಬಾಳಿಕೆಗೆ ಈಗ ಅಂತ್ಯ ಬರಬೇಕಾಗಿದೆ ಎಂದ ಅವರು ಸೆ.24 ರಂದು ಸುಮಾರು 3,500 ಸಹಕಾರಿ ಕ್ಷೇತ್ರದ ದುರೀಣರೊಂದಿಗೆ ಬೃಹತ್ ವಾಹನ ದಂಡಿನೊಂದಿಗೆ ಧರ್ಮಸ್ಥಳಕ್ಕೆ ಪ್ರಯಾಣ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಜೈನಮಠ ಕಾರ್ಕಳದ ರಾಜಗುರು ಧ್ಯಾನಯೋಗಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳವು 800 ವರ್ಷಗಳ ಐತಿಹಾಸಿಕ ಪಾರಂಪರ್ಯವನ್ನು ಹೊಂದಿದೆ. ದುಷ್ಟಶಕ್ತಿಗಳಿಂದ ದೇಶಕ್ಕೆ ಇಂದು ಅತಂಕ ಉಂಟಾಗಿದೆ. ಸರ್ವಧರ್ಮಗಳಿಗೆ ಸಾಕ್ಷಿಯಾಗಿ, ಸಹಬಾಳ್ವೆಯ ಪ್ರತೀಕವಾಗಿ ಧರ್ಮಸ್ಥಳ ಬೆಳಗುತ್ತಿದೆ. ಆದರೆ ಧಾರ್ಮಿಕ ಕ್ಷೇತ್ರಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ರಾಜಕೀಯದ ಪ್ರಭಾವವೂ ಇಲ್ಲಿ ಅಡಗಿದೆ. ಈ ಸಂದರ್ಭದಲ್ಲಿ ನಾವು ಧರ್ಮಸ್ಥಳದ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಎಂದರು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರವು ಒಂದು ಗುಂಪಿನಿಂದ ಸಿದ್ಧಪಡಿಸಲ್ಪಟ್ಟ ಕುತಂತ್ರವಾಗಿದೆ. ಇದು ನಂಬಿಕೆಯನ್ನು ಕುಂದಿಸಿ ಅರಾಜಕತೆಯನ್ನು ಸೃಷ್ಟಿಸುವ ಕೆಲಸವಾಗಿದೆ. ಜಾತಿ?ಜಾತಿಗಳ ನಡುವೆ ಜಗಳ ಹುಟ್ಟಿಸುವುದರೊಂದಿಗೆ ವಿದೇಶಿ ಶಕ್ತಿಗಳ ಪಿತೂರಿಯೂ ಇದಕ್ಕೆ ಕಾರಣವಾಗಿದೆ. ಹೀಗೆ ಭಾವನೆಗಳನ್ನು ದುರ್ಬಲಗೊಳಿಸಿ ಹಿಂದೂಗಳ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ನಡೆಯುತ್ತಿದೆ. ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯಗಳಿಗೆ ಸಮಾಜವೇ ಪ್ರಮಾಣಪತ್ರ ನೀಡಿದೆ. ಇಲ್ಲಿ ಎಸ್‌ಐಟಿ ತನಿಖೆ ಮೂಲಕ ನೀಡುವ ಅಗತ್ಯವಿಲ್ಲ ಎಂದರು.
ಕರ್ನಾಟಕ ಆರ್ಯಾ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮಿಜಿಯವರು ಆಶೀರ್ವಚನ ನೀಡಿ ಮಾತನಾಡಿ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧದ ನಿಮ್ಮ ಹೋರಾಟದಲ್ಲಿ ನಾವು ಸಹ ನಿಮ್ಮೊಂದಿಗಿದ್ದೇವೆ. ನಮ್ಮ ವೈಯಕ್ತಿಕ ಅಸ್ತಿತ್ವಕ್ಕೂ ಧಕ್ಕೆ ತರುವ ಕೆಲಸಗಳು ನಡೆಯುತ್ತಿವೆ. ಸಮಾಜವು ಬೇಗನೆ ಜಾಗೃತವಾಗಬೇಕು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ವಸಂತ ಗಿಳಿಯಾರು ಪ್ರಸ್ತಾವನೆ ಗೈದು ಸುಮಾರು 12 ವರ್ಷಗಳಿಂದ ಸೌಜನ್ಯ ಪ್ರಕರಣವನ್ನು ಮಂಡಿಸಿಕೊಂಡು ಧಾರ್ಮಿಕ ಕೇಂದ್ರ ಹಾಗೂ ಹೆಗ್ಗಡೆಯವರ ವಿರುದ್ಧ ಅಪ್ಪರಚಾರ ನಡೆಯುತ್ತಿದೆ. ಜೈನರ ಮತ್ತು ಹಿಂದೂಗಳ ನಡುವೆ ಧರ್ಮಗಳ ನಡುವೆ ಬಿಕ್ಕಟ್ಟು ಹುಟ್ಟಿಸುವ ಕೆಲ ಅಧರ್ಮಿಯರು ನಡೆಸುತ್ತಿದ್ದಾರೆ. ವ್ಯವಸ್ಥಿತ ಸಂಚಿನ ವಿರುದ್ಧ ನಾವೆಲ್ಲ ಸೇರಿ ಹೋರಾಡಬೇಕಾಗಿದೆ ಎಂದರು.
ಶ್ರೀ ರಾಮಕೃಷ್ಣ ಆಶ್ರಮ, ಬೈಲೂರು ಮಠದ ಸ್ವಾಮಿ ಪ್ರಭೋದನಂದಜೀ ಮಹಾರಾಜ್, ಸ್ವಾಮಿ ವಿಭೂದನಂದ ಸ್ವಾಮಿ ಮಹಾರಾಜ್ ಉಪಸ್ಥಿತಿಯಲ್ಲಿ ಕಾರ್ಕಳದ ಉದ್ಯಮಿ ಬೋಳ ಪ್ರಭಾಕರ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಹಿಂದೂ ಐಕ್ಯ ವೇದಿಕೆ ಕೇರಳ ರವೀಶ್ ತಂತ್ರಿ ಕುಂಟಾರು ದಿಕ್ಕೂಚಿ ಭಾಷಣ ಭಾಷಣ ಮಾಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸದಸ್ಯ, ಜಿಲ್ಲಾ ಜಾಗೃತಿ ವೇದಿಕೆ, ಉಡುಪಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹಿರಿಯ ನ್ಯಾಯವಾದಿ ಎಮ್.ಕೆ. ವಿಜಯ್ ಕುಮಾರ್, ವಕೀಲರ ಸಂಘ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಉದ್ಯಮಿ ಗಣಪತಿ ಹೆಗ್ಡೆ ಬೋರ್ಕಟ್ಟೆ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕಾರ್ಕಳ ಭಾಸ್ಕರ ಕೋಟ್ಯಾನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೇಂದಬೆಟ್ಟು ಸಾಣೂರು ಆಡಳಿತ ಮೊಕೇಸರರು ರಾಮ ಭಟ್ ಸಾಣೂರು, ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ, ಶ್ರೀ ರಾಜೇಶ್ವರಿ ಶಿಕ್ಷಣ ಸಂಸ್ಥೆ ಸಾಣೂರು ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.