ಪುಂಜಾಲಕಟ್ಟೆ ಜನೌಷಧಿ ಕೇಂದ್ರ ಸಿಬ್ಬಂದಿಯ ಸಮಯಪ್ರಜ್ಞೆ: ಆಟೋ ಚಾಲಕನ ಜೀವ ರಕ್ಷಣೆ
ಬಂಟ್ವಾಳ: ಪುಂಜಾಲಕಟ್ಟೆಯಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರದ ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ ಆಟೋ ಚಾಲಕರೋರ್ವರ ಜೀವ ಉಳಿಸಿದ ಘಟನೆ ನಡೆದಿದೆ.
ಜನೌಷಧ ಕೇಂದ್ರದಿಂದ ಆಟೋ ಚಾಲಕರೊಬ್ಬರು ಔಷಧಿ ಖರೀದಿಸುತ್ತಿದ್ದಾಗಲೇ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು, ಅವರ ಈ ಪರಿಸ್ಥಿತಿಯನ್ನು ಗಮನಿಸಿದ ಕೇಂದ್ರದ ಸಿಬಂದಿ ಸುರೇಖಾ ಅವರು ಇತರ ಸಿಬ್ಬಂದಿಯ ಸಹಕಾರದಿಂದ ತಕ್ಷಣ ಅವರನ್ನು ಕೇಂದ್ರದ ಒಳಗೆ ಕರೆದುಕೊಂಡು ಬಂದು ರಕ್ತದೊತ್ತಡ ಪರೀಕ್ಷಿಸಿದರು.
ಈ ಸಂದರ್ಭ ಆಟೋಚಾಲಕನ ರಕ್ತದೊತ್ತಡ ತೀರಾ ಕಡಿಮೆಯಾಗಿ ಅಪಾಯಕಾರಿ ಸ್ಥಿತಿಗೆ ತಲುಪಿರುವುದು ಗಮನಕ್ಕೆ ಬಂದು ಆವಶ್ಯಕ ಉಪಚಾರ ನೀಡಿದರೂ, ರೋಗಿ ಪ್ರಜ್ಞೆ ಕಳೆದುಕೊಂಡಾಗಿತ್ತು. ಆಗ ಸುರೇಖಾ ಅವರು ತುರ್ತುಸಂದರ್ಭದಲ್ಲಿ ರೋಗಿಯ ಪ್ರಾಣ ಉಳಿಸುವ ಸಿಪಿಆರ್ ವೈದ್ಯಕೀಯ ವಿಧಾನದಿಂದ ಎದೆಯನ್ನು ಒತ್ತಿ ತುರ್ತು ಚಿಕಿತ್ಸೆ ನೀಡಿದ ಪರಿಣಾಮ ಆಟೋ ಚಾಲಕ ಅವರಿಗೆ ಪ್ರಜ್ಞೆ ಮರಳಿ ಬಂದಿದೆ. ಬಳಿಕ ಅವರನ್ನು ತಜ್ಞ ವೈದ್ಯರ ಬಳಿಗೆ ತಪಾಸಣೆಗೆ ಸಾಗಿಸಲಾಯಿತು.
ಸುರೇಖಾ ಅವರ ಸಮಯೋಚಿತ ಕಾರ್ಯದಿಂದ ಜೀವ ಉಳಿಸಿದ ಈ ಕ್ರಮವನ್ನು ಸ್ಥಳೀಯರು ಶ್ಲಾಘಿಸಿದ್ದು, ಸುರೇಖಾ ಅವರ ಸೇವಾ ಮನೋಭಾವನೆಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಅಪಘಾತಕ್ಕೆ ತುರ್ತು ಚಿಕಿತ್ಸೆ, ಉಚಿತ ಇಸಿಜಿ ನಡೆಸಿದ್ದು, ಕೇಂದ್ರದ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತವಾಗಿದೆ.