ಲಂಕೆಯ ವಿನಾಶಕ್ಕೆ ನಾಂದಿಯಾದ ಬಂಗಾರದ ಜಿಂಕೆ: ಡಾ. ರಾಘವೇಂದ್ರ ರಾವ್ ಪಡುಬಿದ್ರಿ
ಅವರು ಇಂದು ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಮಾಲೆಯ ನವಮ ಸೋಪಾನ ‘ರತ್ನಹರಿಣದ ಬೆನ್ನು ಹತ್ತಿ’ ಎಂಬ ವಿಷಯದ ಕುರಿತು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.
ಶೂರ್ಪನಖಿಗಾದ ಅವಮಾನಕ್ಕೆ ಪ್ರತೀಕಾರವಾಗಿ ರಾವಣನು ಮಾವನಾದ ಮಾರೀಚನ ಸಹಕಾರ ಅಪೇಕ್ಷಿಸುತ್ತಾನೆ. ಚಿನ್ನದ ಜಿಂಕೆಯಾಗಿ ಸೀತೆಯನ್ನು ಮೋಹಗೊಳಿಸಿ ಅಪಹರಿಸಲು ನೆರವಾಗಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ಮಾರೀಚ ಮೊದಲು ಒಪ್ಪದೆ ರಾವಣನಿಗೆ ರಾಮನಿಂದ ದೂರವಿರುವಂತೆ ವಿವೇಕದ ಮಾತುಗಳನ್ನು ಹೇಳುತ್ತಾನೆ. ಆದರೆ ತಂಗಿಯ ಮಾತು ಕೇಳಿ ಮತ್ತೆ ಮಾರೀಚನಿಗೆ ಒಪ್ಪುವಂತೆ ಬಲಾತ್ಕರಿಸುತ್ತಾ, ಒಪ್ಪದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದರಿಂದ ರಾವಣನಿಂದ ಸಾಯುವುದಕ್ಕಿಂತ ರಾಮನ ಬಾಣಕ್ಕೆ ತುತ್ತಾಗಿ ಸಾಯುವುದೇ ಶ್ರೇಯಸ್ಕರ ಎಂದು ಭಾವಿಸಿದ ಮಾರೀಚನು ಮಾಯಾ ಜಿಂಕೆಯಾಗುತ್ತಾನೆ ಎಂದರು.
ಕನ್ನಡ ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ ಮತ್ತು ಅ.ಭಾ.ಸಾ.ಪ. ಕಾರ್ಕಳ ಘಟಕದ ಉಪಾಧ್ಯಕ್ಷ ಏರ್ ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ಮಾಲತಿ ವಸಂತರಾಜ್ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಸುಲೋಚನಾ ಬಿ.ವಿ. ವಂದಿಸಿದರು.