ಕತೆ ಹೇಳುವ ಅಜ್ಜಿಯರಿಲ್ಲ, ಕೇಳುವ ಪುಳ್ಳಿಗಳೂ ಇಲ್ಲ: ಡಾ. ಪದ್ಮನಾಭ ಭಟ್

ಕತೆ ಹೇಳುವ ಅಜ್ಜಿಯರಿಲ್ಲ, ಕೇಳುವ ಪುಳ್ಳಿಗಳೂ ಇಲ್ಲ: ಡಾ. ಪದ್ಮನಾಭ ಭಟ್

 ಐನ್ ಕೈ ಅಜ್ಜಿ ಕತೆ ಪುಸ್ತಕ ಬಿಡುಗಡೆ


ಕಟೀಲು: ಪ್ರಾಣಿ, ಪಕ್ಷಿ, ಪ್ರಕೃತಿ, ನೀತಿ, ಸಮುದ್ರ ರಾಜ ರಾಣಿ ಹೀಗೆ ನಮ್ಮ ಹಳ್ಳಿಗಾಡಿನ ಸೊಗಡಿನ ಕಲ್ಪನೆಗಳಿಂದ ಕನಸುಗಳನ್ನು ಕಟ್ಟಿಸುವ ನೀತಿಬೋಧಕ ರಂಜನೀಯ ಕತೆಗಳನ್ನು ಹೇಳುತ್ತಿದ್ದ ಅಜ್ಜಿಯರು ಮನೆಗಳಲ್ಲಿ ಇಲ್ಲ. ಕತೆ ಹೇಳುವ ಅಜ್ಜಿಯರು ಇದ್ದರೂ ಶಾಲೆಯ ಹೋಂವರ್ಕ್ ಮೊಬೈಲ್ ಟಿವಿಗಳ ಹಿಂದೆ ಬಿದ್ದಿರುವ ಪುಳ್ಳಿಗಳು ಅಂದರೆ ಮೊಮ್ಮಕ್ಕಳು ಇಲ್ಲ ಎಂದು ತುಳು ಕನ್ನಡ ಸಾಹಿತಿ ಡಾ. ಪದ್ಮನಾಭ ಭಟ್ ಎಕ್ಕಾರು ಹೇಳಿದರು.

ಅವರು ಡಾ. ಯಾದವ ಸಸಿಹಿತ್ಲು ಅವರು ತುಳು ಜಾನಪದದ ಅಜ್ಜಿ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಐನ್ ಕೈ ಅಜ್ಜಿ ಕತೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಾದ ಕಾರ್ತಿಕ್ ಶೆಟ್ಟಿಗಾರ್, ಕೀರ್ತನ್ ಶೆಟ್ಟಿಗಾರ್, ರಿಷಿತ್, ಚಿನ್ಮಯ್ ಹೆಚ್ ಕೋಟ್ಯಾನ್, ರಕ್ಷಾ. ಕೆ.ಶೆಟ್ಟಿಗಾರ್, ಚಿನ್ಮಯ್ ಎಂ.ಕೆ., ಅನುಶ್ರೀ, ಧನ್ವಿ ಇವರು ತಮ್ಮ ತಮ್ಮ ಶಾಲಾ ಚೀಲದಿಂದ ಅಜ್ಜಿಕತೆ ಅನುವಾದ ಪುಸ್ತಕಗಳನ್ನು ತೆಗೆದು ಬಿಡುಗಡೆಗೊಳಿಸಿದರು.

ಕೃತಿಕಾರ ವಿ.ಕೆ. ಯಾದವ್ ಮಾತನಾಡಿ, ಅಜ್ಜಿ ಕತೆಗಳನ್ನು ಅದೇ ರೀತಿ ಹಳ್ಳಿ ಮದ್ದುಗಳ ಮಾಹಿತಿಗಳನ್ನು ದಾಖಲಿಸುವ ಕೆಲಸವನ್ನು ಮಕ್ಕಳು ಮಾಡಬೇಕು. ಕತೆಗಳನ್ನು ಅಜ್ಜಿಯಂದಿರಲ್ಲಿ ಕೇಳುವ ಹಠ ಮಕ್ಕಳು ಮಾಡಬೇಕು. ಕತೆಗಳನ್ನು ಓದಬೇಕು. ಜೊತೆಗೆ ತುಳು ಭಾಷೆಯನ್ನು ತುಳುವರಾದ ನಾವೇ ಮಾತಾಡಿ ಉಳಿಸಿಕೊಳ್ಳಬೇಕು. ವಿದೇಶದವರು ಡೆಲ್ಲಿಯವರು ತುಳು ಉಳಿಸಲು ಆಗದು ಎಂದು ಹೇಳಿದರು.

ಪುಸ್ತಕದ ಆಯ್ದ ಕತೆಗಳನ್ನು ಕಾರ್ತಿಕ್ ಶೆಟ್ಟಿಗಾರ್, ರಕ್ಷಾ. ಕೆ. ಶೆಟ್ಟಿಗಾರ್ ಓದಿದರು.

ಜನಪದ ಅಧ್ಯಯನಕಾರ ಎಸ್.ಆರ್. ಪ್ರದೀಪ್, ಕಟೀಲು ಪ್ರೌಢಶಾಲೆಯ ಉಪಪ್ರಚಾರ್ಯ ರಾಜಶೇಖರ ಎನ್. ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ತಂತ್ರಿ, ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ಹೆರಿಕ್ ಪಾಯಸ್, ವಿದ್ಯಾರ್ಥಿ ನಾಯಕರಾದ ಶಶಿಕಾಂತ, ಸಾವನಿ ಉಪಸ್ಥಿತರಿದ್ದರು.

ತುಳು ಶಿಕ್ಷಕಿ ಸುಷ್ಮಾ ನಿರೂಪಿಸಿದರು. ಅನಿಲ್ ಕುಮಾರ್ ಸ್ವಾಗತಿಸಿ, ರೋಹಿಣಿ ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article