ಪ್ರೀತಿ ನಿರಾಕರಣೆ: ಹುಟ್ಟುಹಬ್ಬದ ದಿನವೇ ಪ್ರೇಯಸಿಯ ಹತ್ಯಾ ಯತ್ನ

ಪ್ರೀತಿ ನಿರಾಕರಣೆ: ಹುಟ್ಟುಹಬ್ಬದ ದಿನವೇ ಪ್ರೇಯಸಿಯ ಹತ್ಯಾ ಯತ್ನ


ಕುಂದಾಪುರ: ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಎಂಬಲ್ಲಿ ಹುಚ್ಚು ಪ್ರೇಮಿಯೊಬ್ಬ ತನ್ನ ಪ್ರೇಯಸಿಯು ಪ್ರೇಮ ನಿರಾಕರಣೆ ಮಾಡಿದಳು ಎಂಬ ಕಾರಣದಿಂದ ಅವಳ ಹುಟ್ಟುಹಬ್ಬವಾದ ಶುಕ್ರವಾರವೇ ಅವಳನ್ನು ತಿವಿದು ಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಕಾರ್ತಿಕ್ ಮತ್ತು ರಕ್ಷಿತಾ ಕೊಕ್ಕರ್ಣೆಯ ಅಕ್ಕ ಪಕ್ಕದ ಮನೆಯ ನಿವಾಸಿಗಳು. ಇಬ್ಬರೂ ಸಂಬಂಧಿಕರೂ ಹೌದು. ಬಾಲ್ಯದಿಂದಲೂ ಒಟ್ಟಿಗೇ ಆಡಿ ಬೆಳೆದಿದ್ದು, ಕಾರ್ತಿಕನಿಗೆ ಆಕೆಯಲ್ಲಿ ಅನುರಾಗ ಉಂಟಾಗಿತ್ತು. ಸುಮಾರು ಐದು ವರ್ಷಗಳಿಂದಲೂ ಈ ಪ್ರೇಮ ವ್ಯವಹಾರ ಮುಂದುವರಿದುಕೊಂಡು ಬಂದಿತ್ತು. ರಕ್ಷಿತಾ ತಾಲೂಕು ಪಂಚಾಯತ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಕಾರ್ತಿಕನಿಗೆ ದೊಡ್ಡ ಕೆಲಸವೇನೂ ಇರಲಿಲ್ಲ. ಆಕೆಯ ಮನೆಯವರಿಂದ ಇವರಿಬ್ಬರ ಮದುವೆಗೆ ವಿರೋಧವಿತ್ತು. ಸುಮಾರು ಹದಿನೈದು ದಿನಗಳ ಹಿಂದೆ ಎರಡೂ ಕುಟುಂಬಗಳವರು ಪಂಚಾಯಿತಿಗೆ ನಡೆಸಿ, ಕಾರ್ತಿಕ್ ಇನ್ನು ಮುಂದೆ ರಕ್ಷಿತಾಳ ಸುದ್ದಿಗೆ ಬರಬಾರದು ಎಂದು ನಿರ್ಣಯಿಸಿದ್ದರು. ಅಂತೆಯೇ ಕಾರ್ತಿಕ್ ಮನದ ನೋವು ನುಂಗಿಕೊಂಡು, ತಾನಿನ್ನು ರಕ್ಷಿತಾಳ ಜೀವನದಲ್ಲಿ ಬರುವುದಿಲ್ಲ, ಮದುವೆಗೆ ಆಹ್ವಾನಿಸಿದರೆ ಬಂದು ಹೋಗುವೆ ಎಂದು ಪ್ರಮಾಣವನ್ನೂ ಮಾಡಿದ್ದ. ರಕ್ಷಿತಾ ಆತನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಳು.

ಇಷ್ಟೆಲ್ಲಾ ಆಗಿದ್ದರೂ ಮತ್ತೆ ಇಂದು ಅವನಿಗೇನಾಯಿತೋ ಬೆಳಗ್ಗೆ ರಕ್ಷಿತಾ ಕೆಲಸಕ್ಕೆಂದು ಹೊರಟು ಬಸ್ ನಿಲ್ದಾಣ ತಲುಪುವಾಗ ಇದ್ದಕ್ಕಿದ್ದಂತೆ ಅವಳೆದುರು ಪ್ರತ್ಯಕ್ಷವಾದ ಪ್ರೇಮಿ ಕಾರ್ತಿಕ್ ಚಾಕುವಿನಿಂದ ಆಕೆಗೆ ಬಲವಾಗಿ ಇರಿದೇ ಬಿಟ್ಟ. ಆಕೆಯ ಕುತ್ತಿಗೆ, ಎದೆ, ಹೊಟ್ಟೆ ಭಾಗಗಳಲ್ಲಿ ತೀವ್ರ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ತಕ್ಷಣ ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ಒಯ್ಯಲಾಗಿದ್ದು, ಅಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಕಾರ್ತಿಕ್ ಬೈಕ್ ಏರಿ ಪರಾರಿಯಾಗಿದ್ದಾನೆ. 

ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article