ಯಕ್ಷಗಾನ ಪ್ರದರ್ಶನಕ್ಕೆ ಕಾಲಮಿತಿ ಅಳವಡಿಕೆ: ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧಾರ

ಯಕ್ಷಗಾನ ಪ್ರದರ್ಶನಕ್ಕೆ ಕಾಲಮಿತಿ ಅಳವಡಿಕೆ: ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧಾರ

ಕುಂದಾಪುರ: ಕರ್ನಾಟಕ ಕರಾವಳಿಯ ಗಂಡುಕಲೆ ಎಂದೇ ಖ್ಯಾತಿ ಹೊಂದಿ, ಜನಪ್ರಿಯವಾದ ಯಕ್ಷಗಾನ ಬಯಲಾಟಗಳ ಪ್ರದರ್ಶನದಲ್ಲಿ ಇತ್ತೀಚೆಗೆ ಕಾಲಮಿತಿ ಪ್ರದರ್ಶನ ಎಂಬೊಂದು ಕಾಂನ್ಸೆಪ್ಟ್ ನುಸುಳಿಕೊಂಡು ಮೇಳಗಳವರಿಗೆ, ಕಲಾವಿದರಿಗೆ, ಯಕ್ಷಗಾನ ಆಟ ಆಡಿಸುವವರಿಗೆ ತಲೆನೋವು ಸೃಷ್ಟಿಸಿತ್ತು. 

ಕೆಲವರು ಯಕ್ಷಗಾನ ಪ್ರಸಂಗ ಆಡಿಸುವುದು ಒಂದು ಸಾಂಪ್ರದಾಯಿಕ ಕಾರ್ಯ, ಅದರಲ್ಲಿ ಕಾಲಮಿತಿ ಷರತ್ತು ತೂರಿಸಿ ಸಂಪ್ರದಾಯ ಮುರಿಯುವುದು ತರವಲ್ಲ ಎಂದು ವಾದಿಸಿದರೆ, ಇನ್ನು ಕೆಲವರು ಇಡೀ ರಾತ್ರಿ ಆಟ ನೋಡುವ ಪ್ರೇಕ್ಷಕರು ಕಡಿಮೆಯಾಗಿದ್ದಾರೆ. ಆದ್ದರಿಂದ ಕಾಲಮಿತಿಯಲ್ಲೇ ಯಕ್ಷಗಾನ ಪ್ರದರ್ಶಿಸುವುದು ವಿಹಿತ ಎಂಬ ವಾದ ಮುಂದಿಟ್ಟಿದ್ದಾರೆ. 

ರಾತ್ರಿ ವೇಳೆಯಲ್ಲೇ ಪ್ರದರ್ಶನಗೊಳ್ಳುವ ಕಲೆ ಯಕ್ಷಗಾನ. ಮೊದಲು ರಸ್ತೆ ಸೌಲಭ್ಯ, ವಾಹನಗಳ ವ್ಯವಸ್ಥೆ ಈಗಿನಷ್ಟು ಇರಲಿಲ್ಲ. ಯಕ್ಷಗಾನ ನೋಡಲು ಹೋದವರು ಮಧ್ಯೆ ಎದ್ದು, ಅಪರಾತ್ರಿಯಲ್ಲಿ ಮನೆ ಸೇರಲು ಆಗುತ್ತಿರಲಿಲ್ಲ. ಈಗಾದರೆ ಬಹುತೇಕ ಎಲ್ಲರ ಬಳಿಯೂ ವಾಹನವಿದೆ. ರಸ್ತೆ ಸಂಪರ್ಕವೂ ಚೆನ್ನಾಗಿದೆ. ಯಾವ ವೇಳೆಯಲ್ಲೂ ಮನೆ ತಲುಪಬಹುದು. ಮಿಗಿಲಾಗಿ ಇಂಟರ್ನೆಟ್ ಸೌಲಭ್ಯದಿಂದ ಎಲ್ಲಿಯೂ, ಯಾವಾಗಲೂ ಯಕ್ಷಗಾನ ನೋಡಬಹುದು. ಆದ್ದರಿಂದ ರಾತ್ರಿಯಿಡಿ ನಿದ್ದೆಗೆಟ್ಟು ಆಟ ನೋಡುವವರು ಕಡಿಮೆಯಾಗಿದ್ದಾರೆ. 

ಪ್ರೇಕ್ಷಕರನ್ನು ಪ್ರದರ್ಶನ ಮುಗಿವವರೆಗೂ ಹಿಡಿದಿಟ್ಟುಕೊಳ್ಳಲು ಆಟ ಆಡಿಸುವ ಕೆಲವರು ಮಧ್ಯೆ ಮಧ್ಯೆ ಚಾ-ಬೋಂಡಾ ವಿತರಿಸುವ ಗಿಮಿಕ್ ಕೂಡಾ ಮಾಡಿದ್ದಾರೆ. ಆದರದು ಯಶಸ್ವಿಯಾಗಲಿಲ್ಲ. ಯಕ್ಷಗಾನ ಪ್ರದರ್ಶನಗೊಳ್ಳುವಾಗ ಸಭೆ ಪ್ರೇಕ್ಷರಿಂದ ತುಂಬಿದ್ದರೆ ಕಲಾವಿದರಿಗೂ, ಆಟ ಆಡಿಸುವವರಿಗೂ ಸಮಾಧಾನ. ಆದರೆ, ಆರಂಭದಲ್ಲಿ ಸಭೆ ತುಂಬಿದ್ದರೂ ಅರ್ಧ ಮುಗಿಯುವ ಮುನ್ನವೇ ಕುರ್ಚಿಗಳು ಖಾಲಿಯಾದರೆ, ಎದುರಿದ್ದವರು ತೂಕಡಿಸಿದರೆ ಯಾರಿಗಾಗಿ ನಾವು ಆಟ ತೋರಿಸಬೇಕು ಎಂಬ ಬೇಸರ ಮೇಳಗಳವರಿಗೆ ಬರುತ್ತದೆ. ಈ ಎಲ್ಲ ರಗಳೆಗಳಿಂದ ರೋಸಿ ಹೋದ ಯಕ್ಷಗಾನ ಮೇಳಗಳ ಮುಖ್ಯಸ್ಥರೆಲ್ಲ ಸಭೆ ಸೇರಿ ಈ ಬಗ್ಗೆ ಚರ್ಚಿಸಿ ಒಂದು ಪರಿಹಾರೊಪಾಯ ಕಂಡುಕೊಂಡಿದ್ದಾರೆ. 

ಕೋಟದ ಶ್ರೀ ಅಮೃತೇಶ್ವರೀ ದೇವಳ ಸಭಾಂಗಣದಲ್ಲಿ ಪ್ರಮುಖ ಯಕ್ಷಗಾನ ಮೇಳಗಳ ಮುಖ್ಯಸ್ಥರೆಲ್ಲ ಸಭೆಯೊಂದನ್ನು ನಡೆಸಿ ಈ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಇದರಲ್ಲಿ ಪಾಲ್ಗೊಂಡ ಬಡಗು ತಿಟ್ಟಿನ ಬಹುತೇಕ ಮೇಳಗಳ ಯಜಮಾನರು, ಮುಖ್ಯಸ್ಥರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಇಲ್ಲಿ ತೀರ್ಮಾನಗೊಂಡಂತೆ, ಮುಂಬರುವ ಮೇಳಗಳ ತಿರುಗಾಟ ಋತುವಿನಿಂದ ಎಲ್ಲಾ ಬಯಲಾಟ ಮೇಳ ಗಳನ್ನೂ ಕಾಲಮಿತಿ ಪ್ರದರ್ಶನಕ್ಕೆ ಸೀಮಿತಹೋಳಿಸುವುದು. ರಾತ್ರಿ 7.30 ರಿಂದ ರಾತ್ರಿ 1 ಗಂಟೆಯವರೆಗೆ ಪ್ರದರ್ಶನಗಳನ್ನು ನಡೆಸುವುದು. ಇನ್ನು ಅನಿವಾರ್ಯ ಸಂದರ್ಭಗಳಲ್ಲಿ ಅಂದರೆ, ಪ್ರಸಂಗದ ಕಥಾನಕವೇ ದೀರ್ಘವಾಗಿದ್ದರೆ, ರಾತ್ರಿ 1.30 ರ ವರೆಗೆ ಮಾತ್ರ ನಡೆಸುವುದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಸಮಯದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸುವುದೆಂತಲೂ ನಿರ್ಧರಿಸಲಾಯಿತು.

ಈಗಾಗಲೇ ತೆಂಕುತಿಟ್ಟಿನಲ್ಲಿ ಕೆಲವು ಮೇಳಗಳು ಯಶಸ್ವಿಯಾಗಿ ಕಾಲಮಿತಿ ಬಯಲಾಟ ಪ್ರದರ್ಶನ ನೀಡುತ್ತಿವೆ. ಮುಖ್ಯವಾಗಿ ಧರ್ಮಸ್ಥಳ ಮೇಳ ಕಳೆದ ಕೆಲವು ವರ್ಷಗಳಿಂದ ಸಂಜೆ 7 ಗಂಟೆಯಿಂದ ರಾತ್ರಿ 12 ಗಂಟೆಯ ತನಕ ಪ್ರದರ್ಶನ ನೀಡುತ್ತಿದೆ. ಈ ಫಾರ್ಮುಲಾ ಯಶಸ್ಸು ಕಂಡಿದೆ. ಇದೇ ಮಾದರಿಯಲ್ಲಿ ಸಮಯದ ಮಾರ್ಪಾಟುಗಳೊಂದಿಗೆ ನಿರ್ಧಾರ ತಗೆದುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಾಲಿಗ್ರಾಮ ಮೇಳದ ಯಜಮಾನರಾದ ಪಿ. ಕಿಶನ್ ಹೆಗ್ಡೆ ಮಾತನಾಡಿ, ರಾತ್ರಿ ವೇಳೆ ಧ್ವನಿವರ್ಧಕ ಬಳಕೆಗೆ ಅನುಮತಿ ನಿರಾಕರಿಸಿ ಪ್ರದರ್ಶನವನ್ನು ಸ್ಥಗಿತಗೊಳಿಸುವ ಪ್ರಸಂಗಗಳು ಅಲ್ಲಲ್ಲಿ ನಡೆಯುತ್ತಿವೆ. ಹೀಗಾಗಿ ಬೆಳಿಗ್ಗೆಯ ತನಕ ಪ್ರದರ್ಶನ ನಡೆಸಲು ಸಮಸ್ಯೆಯಾಗುತ್ತಿದ್ದು ಡೇರೆ ಮೇಳ ಹೊರತುಪಡಿಸಿ ಎಲ್ಲ ಬಯಲಾಟ ಮೇಳಗಳೂ ಏಕ ರೀತಿಯ ಸಮಯವನ್ನು ನಿಗದಿಪಡಿಸಿಕೊಂಡು ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಜಿಲ್ಲಾಡಳಿತ, ಸರಕಾರಕ್ಕೆ ಮನವಿ ಮಾಡಬೇಕಾಗಿದೆ ಎಂದರು.

ಈ ಬಗ್ಗೆ ಮೇಳದ ಯಜಮಾನರಾದ ಮಂದಾರ್ತಿ ಧನಂಜಯ ಶೆಟ್ಟಿ, ಅಮೃತೇಶ್ವರೀ ಮೇಳದ ಆನಂದ ಸಿ. ಕುಂದರ್, ಮಾರಣಕಟ್ಟೆ ಮೇಳದ ಸದಾಶಿವ ಶೆಟ್ಟಿ ರಘುರಾಮ್ ಶೆಟ್ಟಿ, ಸಾಸ್ತಾನ ಗೋಳಿಗರಡಿ ಮೇಳದ ಯಜಮಾನರಾದ ಜಿ.ವಿಠಲ ಪೂಜಾರಿ, ಮಡಾಮಕ್ಕಿ ಮೇಳದ ಶಶಿಧರ ಶೆಟ್ಟಿ, ಹಾಲಾಡಿ ಮೇಳದ ಅಮರನಾಥ ಶೆಟ್ಟಿ ಆಜ್ರಿ ಮೇಳದ ಅಶೋಕ್ ಶೆಟ್ಟಿ ಚೋನಮನೆ ಅಭಿಪ್ರಾಯ ಮಂಡಿಸಿದರು.

ಯಕ್ಷಗಾನ ವಿಮರ್ಶಕ ಪ್ರೊ. ಎಸ್.ವಿ. ಉದಯ ಕುಮಾರ್ ಶೆಟ್ಟಿ, ಸುಭಾಷ್ ಶೆಟ್ಟಿ ಚಂದ್ರ ಆಚಾರ್ಯ, ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು ಮಂದಾರ್ತಿ ದೇವಳದ ಆಶೋಕ್ ಕುಂದರ್, ರವಿ ಶೆಟ್ಟಿ ವಿಜಯ್, ಗೋಳಿಗರಡಿಯ ಗಣಪಯ್ಯ ಆಚಾರ್, ಎಳ್ಳಂಪಳ್ಳಿ ಜಗನ್ನಾಥ್ ಆಚಾರ್ಯ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article