
ಸೆ.14ರಂದು ಸಹಕಾರಿಗಳ ಧರ್ಮ ಜಾಗೃತಿ ಯಾತ್ರೆಗೆ ಅದ್ಭುತ ಬೆಂಬಲ: ಡಾ. ಎಂ.ಎನ್.ಆರ್.
3 ಸಾವಿರಕ್ಕೂ ಅಧಿಕ ವಾಹನಗಳು ಭಾಗಿ: ಉಜಿರೆಯಿಂದ ಧರ್ಮಸ್ಥಳಕ್ಕೆ ಯಾತ್ರೆ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸಹಕಾರಿಗಳ ಧರ್ಮ ಜಾಗೃತಿ ಯಾತ್ರೆ ಅಂಗವಾಗಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿ, ಪವಿತ್ರ ಕ್ಷೇತ್ರವಾದ ಧರ್ಮಸ್ಥಳ ಕ್ಷೇತ್ರವನ್ನು ಅಪಪ್ರಚಾರದ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ. ಇದರ ಹಿಂದೆ ಕಾಣದ ಶಕ್ತಿಗಳಿದ್ದು, ನಮ್ಮ ಹೋರಾಟದ ಮೂಲಕ ಷಡ್ಯಂತ್ರ ಹೂಡುವ ಎಲ್ಲ ಶಕ್ತಿಗಳನ್ನು ಬಯಲಿಗೆಳೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸಹಕಾರಿ ರತ್ನ ಡಾ. ಎಂಚ.ಎನ್. ರಾಜೇಂದ್ರ ಕುಮಾರ್ ನೇತೃತ್ವದ ಸಹಕಾರಿ ಧರ್ಮ ಜಾಗೃತಿ ಯಾತ್ರೆಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರ ಅಪಪ್ರಚಾರವೆಸಗುವ ಮೂಲಕ ಧರ್ಮಕ್ಷೇತ್ರಗಳಿಗೆ ಅಪಚಾರವೆಸಗುವ ಕೆಲಸವಾಗುತ್ತಿದೆ. ಈ ಮೂಲಕ ಧಾರ್ಮಿಕ ಭಾವನೆಗಳನ್ನು ಸೋಲಿಸುವ ಕೆಲಸವಾಗುತ್ತಿದೆ. ಇದರ ವಿರುದ್ಧ ಸಂಘಟಿತ ಹೋರಾಟವಾಗಬೇಕು ಎಂದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ, ಧರ್ಮಸ್ಥಳ ಕ್ಷೇತ್ರದಿಂದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಭಾರೀ ಕೊಡುಗೆ ಲಭಿಸಿದೆ. ಅದೇ ಕ್ಷೇತ್ರದ ವಿರುದ್ಧ ನಡೆಸುತ್ತಿರುವ ಷಡ್ಯಂತ್ರವನ್ನು ನಾವು ವಿರೋಧಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಆಪತ್ತು ತಪ್ಪಿದ್ದಲ್ಲ. ಈ ಕಾರಣದಿಂದ ನಾವೆಲ್ಲ ಸಂಘಟಿತರಾಗಿ ಧ್ವನಿ ಎತ್ತಬೇಕಾಗಿದೆ ಎಂದರು.
ರಾಜ್ಯ ಹಾಲು ಉತ್ಪಾದಕರ ಸಹಕಾರ ಮಹಾಮಂಡಲದ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ರಾಜೇಂದ್ರ ಕುಮಾರ್ ಮತ್ತು ವೀರೇಂದ್ರ ಹೆಗ್ಗಡೆಯವರು ಈ ಜಿಲ್ಲೆಯ ಅಭಿವೃದ್ಧಿಗೆ ಭಾರೀ ಕೊಡುಗೆ ನೀಡಿದವರು. ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ನಡೆಸುವವರ ವಿರುದ್ಧ ಸಾಂಘಿಕ ಹೋರಾಟ ನಡೆಸುವ ಮೂಲಕ ಷಡ್ಯಂತ್ರಿಗಳಿಗೆ ಸ್ಪಷ್ಟ ಸಂದೇಶ ನೀಡೋಣ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಬ್ಯಾಂಕಿನ ನಿರ್ದೇಶಕರಾದ ಟಿ.ಜಿ. ರಾಜರಾಮ ಭಟ್, ಎಂ. ವಾದಿರಾಜ ಶೆಟ್ಟಿ, ಎಸ್.ಬಿ. ಜಯರಾಮ್ ರೈ, ಕೆ. ಜೈರಾಜ್ ಬಿ. ರೈ, ಕುಶಲಪ್ಪ ಗೌಡ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಉಂಬಳಿ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್, ಕೆಎಂಎಫ್ ಆಡಳಿತ ನಿರ್ದೇಶಕ ವಿವೇಕ್ ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಹಕಾರಿ ಧರ್ಮ ಜಾಗೃತಿ ಯಾತ್ರೆಗೆ ಒಕ್ಕೊರಲ ಬೆಂಬಲ ಸೂಚಿಸಿದರು.
ಸೆ.14ರಂದು ಮಧ್ಯಾಹ್ನ 12ಗಂಟೆಗೆ ಎಲ್ಲ ಸಹಕಾರಿಗಳು ಉಜಿರೆಯಲ್ಲಿ ಸೇರಿ, ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಲು ನಿರ್ಧರಿಸಲಾಗಿದೆ. ಸಹಕಾರಿ ಧರ್ಮ ಜಾಗೃತಿ ಯಾತ್ರೆಯ ಮೂಲಕ ಧರ್ಮ ಸಂರಕ್ಷಣೆ ಹಾಗೂ ಯಾವುದೇ ಜಾತಿಯ ಧರ್ಮ ಕ್ಷೇತ್ರಗಳಿಗೆ ಇನ್ನೂ ಮುಂದೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದ ಒಂದು ಸ್ಪಷ್ಟ ಸಂದೇಶವನ್ನು ರವಾನೆಯಾಗಬೇಕು. ಹಾಗಾಗಿ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಸಹಕಾರಿಗಳು ಈ ಹೋರಾಟದಲ್ಲಿ ಭಾಗವಹಿಸಬೇಕು. -ಡಾ. ಎಂ.ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್