
ಸೆ.21 ರಂದು ವಿಶ್ವ ಹೃದಯ ದಿನದ ಅಂಗವಾಗಿ ವಾಕಥಾನ್
ಮಂಗಳೂರು: ಕೆಎಂಸಿ ಆಸ್ಪತ್ರೆ ಮಂಗಳೂರು ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಸೆ.21 ರಂದು ಬೆಳಗ್ಗೆ 6.30ಕ್ಕೆ ವಾಕಥಾನ್ ಹಮ್ಮಿಕೊಳ್ಳಲಾಗಿದೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಬಳಿಯ ಕೆಎಂಸಿ ಅಸ್ಪತ್ರೆಯಿಂದ ವಾಕಥಾನ್ ಆರಂಭಗೊಳ್ಳಲಿದ್ದು, ಮಂಗಳೂರು ನಗರ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಡಿಸಿಪಿ ಮಿಥುನ್ ಎಚ್.ಎನ್. ಉದ್ಘಾಟಿಸಲಿದ್ದಾರೆ. ಬಲ್ಮಠ ರಸ್ತೆ, ತಾಜ್‌ಮಹಲ್, ಮಿಲಾಗ್ರಿಸ್ ಚರ್ಚ್, ಐಎಂಎ ಭವನ, ಅತ್ತಾವರ, ಸೈಂಟ್ ಮಥಾಯಸ್ ರಸ್ತೆ ಮಾರ್ಗವಾಗಿ ತೆರಳಿ ಕಾಪ್ರಿಗುಡ್ಡದ ಮರೀನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಂಪನ್ನಗೊಳ್ಳಲಿದೆ ಎಂದು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಂಗಳೂರು ಡೀನ್ ಡಾ. ಉನ್ನಿಕೃಷ್ಣನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಎಂಸಿ ಅಸ್ಪತ್ರೆ ಮಂಗಳೂರು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ಮಾತನಾಡಿ, 2006ರಿಂದಲೇ ವಾಕಥಾನ್ ಆಯೋಜಿಸಲಾಗುತ್ತಿದ್ದು, ಕಳೆದ ವರ್ಷ 1500ಕ್ಕೂ ಅಽಕ ಮಂದಿ ಭಾಗವಹಿಸಿದ್ದರು. ಹೃದಯದ ಆರೋಗ್ಯಕ್ಕೆ ನಡಿಗೆ ಅತೀ ಪ್ರಾಮುಖ್ಯ ವಹಿಸುತ್ತದೆ. ಡೋಂಟ್ ಮಿಸ್ ಎ ಬೀಟ್ ಎಂಬ ಪರಿಕಲ್ಪನೆಯಡಿ ಈ ಬಾರಿಯ ಹೃದಯ ದಿನ ಆಚರಿಸಲಾಗುತ್ತಿದೆ ಎಂದರು.
ಹೃದ್ರೋಗ ತಜ್ಞ ಡಾ. ಎಂ.ಎನ್. ಭಟ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಹೆಚ್ಚಾಗುತ್ತಿದೆ. ಅನೇಕ ಮಂದಿ ನಿಯಮಿತ ತಪಾಸಣೆ, ವ್ಯಾಯಾಮ ಮತ್ತು ಜಾಗೃತ ಆಹಾರದ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಕೆಎಂಸಿ ಆಸ್ಪತ್ರೆ ಕಳೆದ 20 ವರ್ಷಗಳಿಂದ ‘ವಾಕ್ ಫಾರ್ ಯುವರ್ ಹಾರ್ಟ್’ ನಡೆಸುತ್ತಿದೆ ಎಂದರು.
ಕೆಎಂಸಿ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಹರೀಶ್ ರಾಘವನ್, ಡಾ. ಐರೆಶ್ ಶೆಟ್ಟಿ ಉಪಸ್ಥಿತರಿದ್ದರು.