
ಲೇಖಕ ಡಾ. ಕಸ್ತೂರಿ ಮೋಹನ ಪೈ ಅವರಿಗೆ ಸನ್ಮಾನ
ಮಂಗಳೂರು: ಡಾ. ಟಿ.ಎಂ.ಎ. ಪೈ ಪ್ರತಿಷ್ಠಾನದ 2023ರ ಸಾಲಿನ ಪ್ರತಿಷ್ಠಿತ ಉತ್ಕೃಷ್ಠ ಕೊಂಕಣಿ ಪುಸ್ತಕ ಪುರಸ್ಕಾರ ಪಡೆದ ‘ಮಹಾಪ್ರಸ್ಥಾನ’ ಕೃತಿಯ ಲೇಖಕ ಡಾ. ಕಸ್ತೂರಿ ಮೋಹನ ಪೈ ಅವರಿಗೆ ಮಂಗಳೂರಿನ ಕೊಂಕಣಿ ಸಂಸ್ಥೆಗಳ ಪರವಾಗಿ ಸನ್ಮಾನಿಸಲು ನಿರ್ಧರಿಸಲಾಗಿದೆ.
ಸೆ.20 ರಂದು ಸಂಜೆ 4 ಗಂಟೆಗೆ ಮಂಗಳೂರು ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ಥ, ಉದ್ಯಮಿ ಕುಡ್ಪಿ ಜಗದೀಶ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಂಕಣಿ ಸಂಘಟನೆಗಳ ಪ್ರಮುಖರಾದ ನಂದಗೋಪಾಲ ಶೆಣೈ, ಪ್ರಭಾ ಭಟ್, ಕೆ. ವಸಂತ ರಾವ್, ಡಾ. ನಾಗೇಶ ಕುಮಾರ್, ರಾಮದಾಸ ಗುಲ್ವಾಡಿ, ಡಾ. ಎ. ರಮೇಶ ಪೈ, ವಿಜಯಲಕ್ಷ್ಮೀ ಕಾಮತ್, ಬಿ.ಆರ್. ಶೆಣೈ, ವಾಸುದೇವ ಕಾಮತ್, ಮುರಲೀಧರ ಪ್ರಭು, ಗಣೇಶ ಕಾಮತ್, ಕೆ.ಪಿ. ಶೆಣೈ, ಆನಂದ ಜಿ.ಪೈ, ರಮೇಶ್ ನಾಯಕ್, ರಾಜೇಶ್ ಕಾಮತ್, ಸಾಹುಕಾರ ಎಂ. ಕಿರಣ ಪೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸನ್ಮಾನ ಸಮಿತಿ ಮುಖ್ಯ ಸಂಚಾಲಕ ಎಂ. ಆರ್. ಕಾಮತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಾ. ಕಸ್ತೂರಿ ಮೋಹನ ಪೈ ಅವರು ಕಳೆದ ಸುಮಾರು 50 ವರ್ಷಗಳಿಂದ ಕೊಂಕಣಿ ಭಾಷೆ, ಶಾಲೆಯಲ್ಲಿ ಕೊಂಕಣಿ ಶಿಕ್ಷಣದ ಕ್ಷೇತ್ರದಲ್ಲಿ, ಪ್ರಸ್ತುತ ವಿಶ್ವ ಕೊಂಕಣಿ ಕೇಂದ್ರದ ಗೌರವ ಕಾರ್ಯದರ್ಶಿಯಾಗಿ ಹಾಗೂ ಜಿ.ಎಸ್.ಬಿ. ಸೇವಾ ಸಂಘ ಮಂಗಳೂರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ. ಸುಮಾರು 250 ಕೊಂಕಣಿ ಲೇಖನಗಳನ್ನು ಬರೆದಿರುತ್ತಾರೆ. ಅವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ ಎಂದು ತಿಳಿಸಿದರು.
ಸಮಿತಿ ಪ್ರಮುಖರಾದ ಡಾ. ಎ. ರಮೇಶ ಪೈ, ಗೀತಾ ಸಿ. ಕಿಣಿ, ಗೋವಿಂದರಾಯ ಪ್ರಭು, ಶಾಂಭವಿ ಪ್ರಭು, ವೆಂಕಟೇಶ ಎನ್. ಬಾಳಿಗಾ ಉಪಸ್ಥಿತರಿದ್ದರು.