
ಧರ್ಮಸ್ಥಳ ಪ್ರಕರಣ-ತಿಮರೋಡಿ ಮನೆಗೆ ನೋಟೀಸ್ ಅಂಟಿಸಿದ ಪೊಲೀಸರು: 21 ರಂದು ತನಿಖೆಗೆ ಹಾಜರಾಗಲು ಸೂಚನೆ
ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಶೋಧ ನಡೆಸಿದ ವೇಳೆ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾಗಿರುವ ಬಗ್ಗೆ ಸೆ.16ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ.ಟಿ ಅಧಿಕಾರಿಗಳು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ನೋಟಿಸ್ ಅಂಟಿಸಿದ್ದಾರೆ.
ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಪೊಲೀಸರು ತೆರಳಿದ್ದಾರೆ.
ಬೆಳ್ತಂಗಡಿ ಪೊಲೀಸರು ಸೆ.18ರಂದು ಉಜಿರೆ ತಿಮರೋಡಿಯವರ ಮನೆಗೆ ಮಹಜರು ನಡೆಸಲು ಹೋಗಿದ್ದರು. ಆದರೆ ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿರಲಿಲ್ಲ.
ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ಸೆ.19ರಂದು ಬೆಳಗ್ಗೆ 6ಕ್ಕೆ ಬೆಳ್ತಂಗಡಿ ಪೊಲೀಸರು ಹೋದಾಗ ಕೂಡ ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಯಲ್ಲಿ ಯಾರೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಸೆ.21ರಂದು ಹಾಜರಾಗಲು ತಿಮರೋಡಿ ಮನೆಯ ಗೋಡೆಗೆ ನೋಟಿಸ್ ಅನ್ನು ಬೆಳ್ತಂಗಡಿ ಪೊಲೀಸರು ಅಂಟಿಸಿ ತೆರಳಿದ್ದಾರೆ.
ವಿಚಾರಣೆ..
ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳ ವಿಚಾರವಾಗಿ ಧರ್ಮಸ್ಥಳ ಗ್ರಾಮಪಂಚಾಯತಿನ ಮಾಜಿ ಅಧ್ಯಕ್ಷ ಕೇಶವ ಗೌಡ ಹಾಗೂ ಹಾಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರಿಗೆ ಎಸ್.ಐ.ಟಿ ನೋಟೀಸ್ ನೀಡಿ ವಿಚಾರಣೆಗೆ ಕರೆಸಿಕೊಂಡಿದೆ.
ಸೆ.19 ರಂದು ಬೆಳಗ್ಗೆ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಮಾಜಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಅವರು ವಿಚಾರಣೆಗೆ ಹಾಜರಾಗಿದ್ದು ಮಧ್ಯಾಹ್ನದ ವೇಳೆಗೆ ಇವರಿಬ್ನರೂ ವಿಚಾರಣೆ ಮುಗಿಸಿ ಹಿಂತಿರುಗಿದ್ದಾರೆ. ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕೇಶವ ಗೌಡ ಹಾಗೂ ಶ್ರೀನಿವಾಸ ರಾವ್ ಅವರು ಹಲವು ಬಾರಿ ಮಾದ್ಯಮಗಳಿಗೆ ಹೇಳಿಕೆ ನೀಡಿ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಅನಾಥ ಶವಗಳು ಸಿಕ್ಕಿದ್ದು ಅದರ ಎಲ್ಲ ದಾಖಲೆಗಳು ಗ್ರಾಮಪಂಚಾಯತಿನಲ್ಲಿದೆ ಎಂದು ಹೇಳಿಕೆ ನೀಡಿದ್ದರು. ಅದೇರೀತಿ ಕೇಶವ ಗೌಡ ಸ್ಮಶಾನಾಗುವ ಮೊದಲು ಬಂಗ್ಲೆ ಗುಡ್ಡ ಪರಿಸರಸಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದರು.
ಈ ಎಲ್ಲ ಹಿನ್ನಲೆಯಲ್ಲಿ ಇವರಿಬ್ಬರಿಗೂ ನೊಟೀಸ್ ನೀಡಿ ವಿಚಾರಣೆಗೆ ಕರೆಸಲಾಗಿದೆ.
ಪುರಷರದ್ದು..
ಎರಡು ದಿನ ಎಸ್.ಐ.ಟಿ ಅಧಿಕಾರಿಗಳು ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಏಳು ತಲೆಬರುಡೆ ಸಹಿತ ಅಸ್ಥಿಪಂಜರಗಳನ್ನು ಪತ್ತೆ ಮಾಡಿದ್ದು, ಇವೆಲ್ಲವೂ ಪುರುಷರದ್ದು ಎಂದು ತಜ್ಞ ವೈದ್ಯರು ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ.17 ರಂದು ಐದು ತಲೆಬರುಡೆ ಸಹಿತ ಅಸ್ಥಿಪಂಜರಗಳನ್ನು ಮಹಜರು ನಡೆಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಮತ್ತು ಸೆ.18 ರಂದು ಕೂಡ ಎರಡು ತಲೆಬರುಡೆ ಸಹಿತ ಅಸ್ಥಿಪಂಜರಗಳನ್ನು ಮಹಜರು ನಡೆಸಿದ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.