
ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದ ಅಭಿವೃದ್ಧಿ: ನರ್ವಾಡೆ ವಿನಾಯಕ್ ಕರ್ಭಾರಿ
ಮಂಗಳೂರು: ಪ್ಲಾಸ್ಟಿಕ್ ಸೇರಿದಂತೆ ಘನತ್ಯಾಜ್ಯವನ್ನು ಸಂಪನ್ಮೂಲವಾಗಿಸುವ ನಿಟ್ಟಿನಲ್ಲಿ ಆರಂಭಗೊಂಡಿರುವ ದ.ಕ. ಜಿಲ್ಲೆಯ ನಾಲ್ಕು ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರ (ಮೆಟೀರಿಯಲ್ ರಿಕವರಿ ಫೆಸಿಲಿಟಿ-ಎಂಆರ್‌ಎಫ್)ಗಳನ್ನು ಬಲಪಡಿಸಲು 2.15 ಕೋಟಿ ರೂ.ಗಳ ಅಗತ್ಯವಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕರ್ಭಾರಿ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್‌ನಲ್ಲಿ ಶುಕ್ರವಾರ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಎಂಆರ್‌ಎಫ್‌ಗಳನ್ನು ಬಲಪಡಿಸಲು ಬ್ಯಾಂಕ್‌ಗಳು ತಮ್ಮ ಸಿಆರ್‌ಎಸ್ ನಿಧಿಯಡಿ ಕೊಡುಗೆ ನೀಡುವಂತೆಯೂ ಮನವಿ ಮಾಡಿದರು.
ಬಳಿಕ ಸುದ್ದಿಗಾರರ ಬಳಿ ಮಾಹಿತಿ ಹಂಚಿಕೊಂಡ ಅವರು, ದ.ಕ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ನಾಲ್ಕು ಎಂಆರ್‌ಎಫ್‌ಗಳು ದ.ಕ. ಜಿಲ್ಲೆಯ 223 ಗ್ರಾಮ ಪಂಚಾಯತ್‌ಗಳೊಂದಿಗೆ ಸಂಪರ್ಕ ಹೊಂದಿವೆ. ಪ್ರಸ್ತುತ ಗ್ರಾಮ ಪಂಚಾಯತ್‌ಗಳು ಮನೆಗಳಿಂದ ಒಣ ಕಸವನ್ನು ಸಂಗ್ರಹಿಸಿ ನಿಗದಿತ ಸ್ಥಳಗಳಲ್ಲಿ ಸಂಗ್ರಹಿಸುತ್ತಿವೆ. ಎಂಆರ್‌ಎಫ್‌ನಿಂದ ಟ್ರಕ್‌ಗಳ ಮೂಲಕ ಈ ನಿಗದಿತ ಸ್ಥಳಗಳಿಂದ ಈ ಘನತಾಜ್ಯವನ್ನು ಸಂಗ್ರಹಿಸಿಕೊಂಡು ಎಂಆರ್‌ಎಫ್ ಕೇಂದ್ರಗಳಲ್ಲಿ ಕಸವನ್ನು ಗಾತ್ರಗಳ ಆಧಾರದಲ್ಲಿ ಬೇರ್ಪಡಿಸಲಾಗುತ್ತದೆ.
ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಬೇಲಿಂಗ್ ಯಂತ್ರವನ್ನು ಬಳಸಿ ಸಾಂದ್ರೀಕೃತಗೊಳಿಸಿ ಮರುಬಳಕೆದಾರರಿಗೆ ರವಾನಿಸಲಾಗುತ್ತದೆ. ಆದರೆ ಮರುಬಳಕೆ ಮಾಡಲಾಗದ ತ್ಯಾಜ್ಯವನ್ನು ಇಂಧನವಾಗಿ ಬಳಸಲು ಸಿಮೆಂಟ್ ಅಥವಾ ಇಟ್ಟಿಗೆ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ ಎಂದರು. ಸಿಬ್ಬಂದಿಗೆ ವಸತಿ ಸೌಕರ್ಯ ಸೇರಿ ಮೂಲಭೂತ ಸೌಲಭ್ಯಕ್ಕೆ ಹಣದ ಅಗತ್ಯವಿದೆ. ಈ ಕೇಂದ್ರಗಳಿಗೆ ಅಗತ್ಯವಾದ ನಾಲ್ಕು ಟ್ರಕ್‌ಗಳು, ಹೆಚ್ಚುವರಿ ಬೇಲಿಂಗ್ ಯುಂತ್ರಗಳನ್ನು ಖರೀದಿಸಲು ಹಣದ ಅಗತ್ಯವಿದೆ.
ಮಾತ್ರವಲ್ಲದೆ, ಮೂರು ಶಿಫ್ಟ್‌ಗಳಲ್ಲಿ ಈ ಕೇಂದ್ರಗಳಲ್ಲಿ ತ್ಯಾಜ್ಯ ನಿರ್ವಹಣೆ ಕಾರ್ಯ ನಡೆಸಲು ಯೋಚಿಸಲಾಗಿದೆ. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಸಿಬ್ಬಂದಿಗೆ ವಸತಿ ಸೌಕರ್ಯವನ್ನೂ ಒದಗಿಸಬೇಕಾಗಿದೆ. ಎಡಪದವಿನ ಕೇಂದ್ರವು ಸದ್ಯ ಎರಡು ಶಿಫ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದನ್ನು ಮೂರು ಶಿಫ್ಟ್‌ಗಳಿಗೆ ವಿಸ್ತರಿಸಲು ಚಿಂತಿಸಾಗಿದೆ. ಹೀಗಾಗಿ ಕಟ್ಟಡ ನಿರ್ಮಾಣ ಸೇರಿದಂತೆ ಇತರ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಣದ ಅಗತ್ಯವಿದೆ. ಅದಕ್ಕಾಗಿ ಸಿಎಸ್‌ಆರ್ ಫಂಡ್‌ಗೆ ಕೋರಿಕೆ ಸಲ್ಲಿಸಲಾಗಿದೆ ಎಂದವರು ಹೇಳಿದರು.
ಒಣ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಗ್ರಾಮ ಪಂಚಾಯಿತಿಗಳು ಮತ್ತು ಎಂಆರ್‌ಎಫ್‌ಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಹೆಚ್ಚುವರಿ ಟ್ರಕ್‌ಗಳು ಅಗತ್ಯವಿದೆ ಎಂದವರು ಹೇಳಿದರು.
ಸುಳ್ಯಕ್ಕೆ ಹೊಸ ಪ್ರಸ್ತಾವನೆ..
ಕರ್ನಾಟಕ ಕರಾವಳಿ ಸ್ಥಿತಿಸ್ಥಾಪಕತ್ವ ಆರ್ಥಿಕತೆಯ ಬಲರ್ಧನೆ (ಕೆ-ಶೋರ್) ಯೋಜನೆಯಡಿಯಲ್ಲಿ ಸುಳ್ಯದಲ್ಲಿ ಮತ್ತೊಂದು ಎಂಆರ್‌ಎಫ್ ಸ್ಥಾಪಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸಂಬಂಧಿತ ಅಧಿಕಾರಿಗಳು ಅನುಮೋದನೆ ನೀಡಿದರೆ, ಜಿಲ್ಲೆಯಲ್ಲಿ ಐದನೇ ಎಂಆರ್‌ಎಫ್ ಸೌಲಭ್ಯದ ಕೆಲಸ ಪ್ರಾರಂಭವಾಗಲಿದೆ ಎಂದು ಜಿಪಂ ಸಿಇಒ ನರ್ವಾಡೆ ವಿನಾಯಕ್‌ಕಾರ್ಭಾರಿ ತಿಳಿಸಿದರು.
ಪ್ಲಾಸ್ಟಿಕ್ ತ್ಯಾಜ್ಯದ ರಸ್ತೆ ನಿರ್ಮಾಣ..
ಎಂಆರ್‌ಎಫ್‌ಗಳಲ್ಲಿ ಸಂಗ್ರಹಿಸಲ್ಪಡುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಈಗಾಗಲೇ ರಸ್ತೆ ಕಾಮಗಾರಿಗಳಿಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 55 ಕಿ.ಮೀ ರಸ್ತೆಗಳನ್ನು ಟಾರ್‌ನೊಂದಿಗೆ ಪ್ಲಾಸ್ಟಿಕ್ ಬೆರೆಸಿದ ಡಾಂಬರೀಕರಣ ಕಾರ್ಯ ನಡೆದಿದೆ. ಕಾಂಕ್ರಿಟ್ ರಸ್ತೆಗಳಿಗೆ ಈ ತ್ಯಾಜ್ಯ ಉಪಯೋಗವಾಗಿದ್ದರೂ ಎನ್‌ಎಚ್‌ಎಐನ ಡಾಂಬರು ರಸ್ತೆಗಳಿಗೆ ಇದು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದಾಗಿದೆ. ಹಾಗಾಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಮತ್ತು ನಿರ್ಮಿತಿ ಕೇಂದ್ರಗಳು ಕೂಡಾ ರಸ್ತೆ ಕಾಮಗಾರಿಗಳಿಗೆ ಇದರ ಬಳಕೆಗೆ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.