ಸಂತ ಫಿಲೋಮಿನಾ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ

ಸಂತ ಫಿಲೋಮಿನಾ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ


ಪುತ್ತೂರು: ವಿದ್ಯಾರ್ಥಿಗಳು ಮಾಡಿದ ತಪ್ಪುಗಳಿಗೆ ಅವರನ್ನು ದೂಷಿಸುವ ಬದಲು, ಪೋಷಕರು ವಿದ್ಯಾರ್ಥಿಗಳಿಗೆ ತಮ್ಮ ತಪ್ಪುಗಳಿಂದ ಕಲಿಯಲು ರಚನಾತ್ಮಕ ಪ್ರತಿಕ್ರಿಯೆ ಮತ್ತು ಮಾರ್ಗದರ್ಶನವನ್ನು ನೀಡುವತ್ತ ಗಮನಹರಿಸಬೇಕು ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಹೆಚ್. ಮಾಧವ ಭಟ್ ಹೇಳಿದರು.


ಅವರು ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ‘ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಹೆತ್ತವರ ಆದರ್ಶಗಳು’ ಎಂಬ ವಿಷಯದ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಿದರು.


ಪ್ರತಿಯೊಬ್ಬ ಪೋಷಕ ಮಾರ್ಗದರ್ಶಕ. ಅವರ ನಡವಳಿಕೆ, ಮೌಲ್ಯಗಳು ಮತ್ತು ವರ್ತನೆಗಳು ವಿದ್ಯಾರ್ಥಿಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಮತ್ತು ಮಾರ್ಗದರ್ಶನ ನೀಡಲು ಉತ್ತಮ ಪೋಷಕರು ಅತ್ಯಗತ್ಯ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಸೂಕ್ಷ್ಮವಾಗುವ ರೀತಿಯಲ್ಲಿ ಜ್ಞಾನವನ್ನು ನೀಡಬೇಕು. ಕಲಿಕೆಯು ಬೆಳವಣಿಗೆ, ಪ್ರೀತಿ ಮತ್ತು ಮಾರ್ಗದರ್ಶನದೊಂದಿಗೆ ಇರಬೇಕು, ಇವು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಗತ್ಯ ಎಂದರು.


ಕಾಲೇಜಿನ ಸಂಚಾಲಕ ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯವಾಗಿ ಮಕ್ಕಳು ತಪ್ಪು ದಾರಿಯನ್ನು ಹಿಡಿದಾಗ ಅವರನ್ನು ಸರಿದಾರಿಗೆ ತಂದು ಅವರ ಬದುಕನ್ನು ರೂಪಿಸುವ ಮಹತ್ತರ ಜವಾಬ್ದಾರಿ ಹೆತ್ತವರ ಪಾಲಿಗೆ ಇದೆ. ಜೊತೆಗೆ ಮಕ್ಕಳನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಳೆಯಲು ಪ್ರೋತ್ಸಾಹವನ್ನು ನೀಡಬೇಕು ಎಂದು ಹೇಳಿದರು. 

ಪ್ರಾಂಶುಪಾಲರಾದ ಅತೀ ವಂದನೀಯ ಡಾ. ಆಂಟನಿ ಪ್ರಕಾಶ್ ಮೊಂತೇರೊ ಪ್ರಾಸ್ತಾವಿಕ ಮಾತುಗಳನ್ನಾಡಿದರು. 

ಮಾಯಿ ದೇ ದೇವುಸ್ ಚರ್ಚ್, ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕಾಸ್ಟ ಅವರು, ನಮ್ಮ ಮಕ್ಕಳು ಯಶಸ್ವಿಯಾಗಲು ಪೋಷಕರು ನೀಡುತ್ತಿರುವ ಬೆಂಬಲ ಪ್ರಶಂಸನೀಯ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕಿ ವಾರಿಜಾ ಮತ್ತು ತಂಡ ಪ್ರಾರ್ಥಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಕುಂಙಿ ಸ್ವಾಗತಿಸಿದರು. ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರಶಾಂತ್ ರೈ ವರದಿಯನ್ನು ವಾಚಿಸಿದರು. ಖಜಾಂಚಿ ಪ್ರೇಮಲತಾ ಕೆ. ಆಯವ್ಯಯ ಪತ್ರ ಮಂಡಿಸಿದರು. ಸಹಾಯಕ ಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಮೊಳೆಯಾರ್ ವಂದಿಸಿದರು. 

ಡಾ. ರಾಧಾಕೃಷ್ಣ ಗೌಡ ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಿಕೊಟ್ಟರು. ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಎಸ್. ಅಬೂಬಕ್ಕರ್ ಆರ್ಲಪದವು ಚುನಾಯಿತರಾದರು. ಸಹಾಯಕ ಪ್ರಾಧ್ಯಾಪಕಿ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಚಂಡೆ ವಾದನ ಹಾಗೂ ಚಕ್ರತಾಳ ಎಲ್ಲರ ಗಮನ ಸೆಳೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article