
ಧರ್ಮಸ್ಥಳ ಬುರುಡೆ ಪ್ರಕರಣವನ್ನು ಪ್ರಸಾರ ಮಾಡಿದ ಯೂಟ್ಯೂಬ್‌ಗಳಿಗೆ ವಿದೇಶಿ ಫಂಡಿಂಗ್ ಸಾಧ್ಯತೆ: ಇಡಿ ತನಿಖೆ
ಈ ಬಗ್ಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುರೇಶ್ ಗೌಡ ಎಂಬವರು ಇಡಿಗೆ ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಅಲ್ಲದೆ ಬಿಜೆಪಿ, ಜೆಡಿಎಸ್ ಮತ್ತಿತರ ಮುಖಂಡರು ಕೂಡ ಇಡಿ, ಎನ್‌ಐಎ ತನಿಖೆಗೆ ಆಗ್ರಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಗೃಹ ಇಲಾಖೆಗೆ ನೀಡಿದ ಮನವಿಯನ್ನು ಸಚಿವಾಲಯ ಇಡಿಗೆ ಕಳುಹಿಸಿದ್ದು, ಹೀಗಾಗಿ ಇಡಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಈ ದೂರಿಗೆ ಸಂಬಂಧಿಸಿ ಪ್ರತ್ಯೇಕ ಪ್ರಕರಣ ದಾಖಲಿಸಲಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೇಮಾ) ಅಡಿಯಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಿದೆ.
ಎರಡು ಎನ್‌ಜಿಒ ಸಂಸ್ಥೆಗಳ ಬಗ್ಗೆ ತನಿಖೆ ನಡೆಸಲಿದ್ದು, ಧರ್ಮಸ್ಥಳ ವಿರುದ್ಧ ಷಡ್ಯಂತರ ಮತ್ತು ಅಪಪ್ರಚಾರ ನಡೆಸಲು ವಿದೇಶದಿಂದ ಅಕ್ರಮವಾಗಿ ಹಣಕಾಸು ನೆರವು ಪಡೆದಿದ್ದಾರೆ ಎಂಬ ದೂರುದಾರರ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಯಲಿದೆ. ಈಗಾಗಲೇ ಧರ್ಮಸ್ಥಳ ಬಗ್ಗೆ ಯೂಟ್ಯೂಬರ್‌ಗಳು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಪೊಲೀಸ್ ಠಾಣೆಗಳಲ್ಲೂ ಕೇಸು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಯೂಟ್ಯೂಬರ್ ಸಮೀರ್ ಮೂರು ಬಾರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು.
ಎನ್‌ಜಿಒಗಳು ಮತ್ತು ಹೋರಾಟಕ್ಕೆ ಸಂಬಂಧಿಸಿದವರ ಕಳೆದ ಐದು ವರ್ಷಗಳ ಬ್ಯಾಂಕ್ ಖಾತೆಗಳ ವಿವರ, ಹಣಕಾಸು ವಹಿವಾಟು, ಪಾನ್ ಕಾರ್ಡ್ ಮಾಹಿತಿ ಸೇರಿದಂತೆ ಎಲ್ಲ ವಿವರ ನೀಡುವಂತೆ ಬ್ಯಾಂಕ್‌ಗಳಿಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.