ದಯಾ ಮರಣಕ್ಕೆ ಉದಯ ಜೈನ್ ಮನವಿ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಪ್ರಕರಣದಲ್ಲಿ ವಿನಾ ಕಾರಣ ನನ್ನ ಹೆಸರು ಎಳೆದು ತಂದಿದ್ದಾರೆ. ಹಾಗಾಗಿ ನನಗೆ ಅತೀವ ಬೇಸರವಾಗಿದ್ದು, ದಯಾ ಮರಣ ಕೋರಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡ ಉದಯ ಜೈನ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಲ್ಲದೆ, ಮಾಧ್ಯಮಗಳಲ್ಲೂ ಮಾತನಾಡಿದ್ದಾರೆ. ಇದು ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಈ ಹಿಂದೆ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಹೊತ್ತಿದ್ದರು. ಬಳಿಕ ಸಿಬಿಐ ವಿಚಾರಣೆಯಲ್ಲಿ ಅವರು ಖುಲಾಸೆಗೊಂಡಿದ್ದರು. ಆದರೆ ಬುರುಡೆ ಪ್ರಕರಣದಲ್ಲಿ ಅವರನ್ನು ಎಸ್‌ಐಟಿ ವಿಚಾರಣೆಗೆ ಕರೆದಿತ್ತು.
ಸೌಜನ್ಯ ಪ್ರಕರಣದಲ್ಲಿ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಸಂತೋಷ್ ರಾವ್ ಆರೋಪಿ ಎಂದು ಬೆಳ್ತಂಗಡಿ ಪೊಲೀಸರು ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸಿಐಡಿ ಹಾಗೂ ಸಿಬಿಐ ತನಿಖೆಯಲ್ಲಿ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ. 13 ವರ್ಷಗಳಿಂದ ನನ್ನ ಹೆಸರನ್ನು ಸುಖಾಸುಮ್ಮನೆ ಸೇರಿಸಲಾಗಿದೆ. ಸಮಾಜ ನನ್ನನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದೆ. ಸೌಜನ್ಯ ಪ್ರಕರಣದಲ್ಲಿ ನಾನು ನಿರ್ದೋಷಿ ಎಂದು ಸಾಬೀತುಪಡಿಸಲು ಬ್ರೈನ್ ಮ್ಯಾಪಿಂಗ್ ಮಾಡಿಸಿದ್ದೇನೆ. ಈ ನಿಟ್ಟಿನಲ್ಲಿ ನನಗೆ ನ್ಯಾಯ ಅಥವಾ ದಯಾಮರಣ ನೀಡಬೇಕು ಎಂದು ಉದಯ್ ಜೈನ್ ಪತ್ರದಲ್ಲಿ ಮನವಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.