ತಿಮರೋಡಿಗೆ ಗಡೀಪಾರು ನೋಟಿಸ್ ನೀಡಲು ಸಿದ್ಧತೆ: ಪುತ್ತೂರಿನ ಸಹಾಯಕ ಕಮಿಷನರ್‌ರ ಆದೇಶ ಪಾಲನೆ
7 ದಿನಗಳಿಗೊಮ್ಮೆ ಮಾನ್ವಿ ಪೊಲೀಸ್ ಠಾಣೆಯ ಠಾಣಾಧಿಕಾರಿಯವರ ಮುಂದೆ ಹಾಜರಾಗಲು ಸೂಚನೆ
ಮಂಗಳೂರು: ಪುತ್ತೂರಿನ ಸಹಾಯಕ ಕಮಿಷನರ್ ಅವರು ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ತಿಮರೋಡಿಗೆ ಗಡೀಪಾರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿಯ ಮನೆಯಲ್ಲಿ ಇಲ್ಲದ ಕಾರಣ ಬೇರೆ ಕಡೆ ಪೊಲೀಸರು ತೆರಳಿದ್ದಾರೆ. ಬೆಂಗಳೂರು ಮತ್ತು ಚಿಕ್ಕಮಗಳೂರಿಗೆ ಪೊಲೀಸ್ ತಂಡ ತೆರಳಿದ್ದು, ಈ ಕಡೆಗಳಲ್ಲಿ ತಿಮರೋಡಿ ತಲೆಮರೆಸಿರುವ ಶಂಕೆ ಪೊಲೀಸರದ್ದು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧನ ಭೀತಿಯಲ್ಲಿ ತಲೆಮರೆಸಿರುವ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮೂರನೇ ನೋಟಿಸ್ ಅಂಟಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಮಹೇಶ್ ಶೆಟ್ಟಿ ತಿಮರೋಡಿಗೆ ಬೆಳ್ತಂಗಡಿ ಪೊಲೀಸರು ಮೊದಲನೇ ನೋಟಿಸ್ ನೀಡಿದ್ದಾರೆ. ತಿಮರೋಡಿ ಮನೆಗೆ ತೆರಳಿದಾಗ ನಾಪತ್ತೆಯಾದ ಕಾರಣ ಪೊಲೀಸರು ಗೋಡೆಗೆ ನೋಟಿಸ್ ಅಂಟಿಸಿದ್ದಾರೆ. ಆ ಬಳಿಕವೂ ತಿಮರೋಡಿ ವಿಚಾರಣೆಗೆ ಹಾಜರಾಗದ ಕಾರಣ ಸೆ. 25ರಂದು ಹಾಜರಾಗುವಂತೆ ಎರಡನೇ ನೋಟಿಸ್‌ನ್ನು ಅಂಟಿಸಲಾಗಿದೆ. ಸದ್ಯ ಮಂಗಳೂರು ಜಿಲ್ಲಾ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ತಿಮರೋಡಿ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಸಹಾಯಕ ಅಭಿಯೋಜಕರಿಗೆ ಕೋರ್ಟ್ ಆಕ್ಷೇಪಣೆಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ಸೆ.27ರಂದು ವಿಚಾರಣೆ ನಿಗದಿಪಡಿಸಿದೆ. ಹೀಗಾಗಿ ತಿಮರೋಡಿ ಅಲ್ಲಿವರೆಗೆ ವಿಚಾರಣೆಗೆ ಹಾಜರಾಗುವುದು ಅನುಮಾನ. ಹಾಗಾಗಿ ಪೊಲೀಸರು ಗುರುವಾರ ಮತ್ತೆ ಮೂರನೇ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ರಾಯಚೂರಿಗೆ ಯಾಕೆ?
ಸಾಮಾನ್ಯವಾಗಿ ಈ ರೀತಿ ಗಡೀಪಾರು ಮಾಡುವಾಗ ಪೊಲೀಸರು ವರದಿಯಲ್ಲಿ ನಾಲ್ಕು ಜಿಲ್ಲೆಗಳ ಹೆಸರನ್ನು ಸೂಚಿಸುತ್ತಾರೆ. ಮುಖ್ಯವಾಗಿ ಆ ಜಿಲ್ಲೆಗಳಲ್ಲಿ ಆರೋಪಿಯ ಇದುವರೆಗಿನ ಕೃತ್ಯಕ್ಕೆ ಪೂರಕವಾದ ಅಂಶಗಳು ಯಾವುದೂ ಇರಬಾರದು. ಅಲ್ಲಿ ಆತನ ಕೃತ್ಯ ಮುಂದುವರಿಯುವುದಕ್ಕೆ ಅವಕಾಶ ಇರಬಾರದು. ಮತ್ತು ಆ ಪ್ರದೇಶ ಸಾಕಷ್ಟು ದೂರ ಇರಬೇಕು. ಬೆಳ್ತಂಗಡಿಯಿಂದ ರಾಯಚೂರಿಗೆ ಸುಮಾರು 532 ಕಿ.ಮೀ. ದೂರ ಇದೆ. ಒಂದು ದಿನದಲ್ಲಿ ಬೆಳ್ತಂಗಡಿಗೆ ಬಂದು ಹೋಗುವುದು ಅಸಾಧ್ಯ. ಈ ಕಾರಣಕ್ಕೆ ರಾಯಚೂರಿಗೆ ಗಡೀಪಾರು ಮಾಡಲಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ಸರಹದ್ದಿಗೆ ಗಡೀಪಾರು ಮಾಡಿದ್ದು, ಈ ಆದೇಶವನ್ನು ಪಾಲನೆ ಮಾಡದೇ ಇದ್ದಲ್ಲಿ, ಕೂಡಲೇ ಬಂಧಿಸಿ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಲು ಸೂಚನೆ ನೀಡಲಾಗಿದೆ. ಪೊಲೀಸರು ಅಥವಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿದಾಗ ಮಾತ್ರ ಜಿಲ್ಲೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗಿದೆ.
ಗಡಿಪಾರು ಆದೇಶದಲ್ಲಿರುವ ಸಮಯದಲ್ಲಿ ಪ್ರತಿ 7 ದಿನಗಳಿಗೊಮ್ಮೆ ಮಾನ್ವಿ ಪೊಲೀಸ್ ಠಾಣೆಯ ಠಾಣಾಧಿಕಾರಿಯವರ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಈ ಆದೇಶದ ವಿರುದ್ಧ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ರಾಯಚೂರಿನ ಮಾನ್ವಿಗೆ ತಿಮರೋಡಿ ಗಡೀಪಾರಿಗೆ ಅಲ್ಲಿನ ಮಂದಿ ವಿರೋಧ ವ್ಯಕ್ತಪಡಿಸಿರುವುದಾಗಿ ಹೇಳಲಾಗಿದೆ.