ಒಳಚರಂಡಿ ವ್ಯವಸ್ಥೆ ತ್ವರಿತ ಕಾಮಗಾರಿಗೆ ಸದನ ಸಮಿತಿ ಸೂಚನೆ

ಒಳಚರಂಡಿ ವ್ಯವಸ್ಥೆ ತ್ವರಿತ ಕಾಮಗಾರಿಗೆ ಸದನ ಸಮಿತಿ ಸೂಚನೆ


ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಸುರತ್ಕಲ್ ವಲಯ ಹಾಗೂ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ (ಯು.ಜಿ.ಡಿ)ಗಳನ್ನು ತ್ವರಿತವಾಗಿ ಅನುಷ್ಠಾನ ಗೊಳಿಸಬೇಕು ಎಂದು ವಿಧಾನಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಸಮಿತಿಯ ಅಧ್ಯಕ್ಷ ಶರವಣ ಟಿ.ಎ. ಅವರ ನೇತೃತ್ವದ ಸಮಿತಿಯು ಬುಧವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಭರವಸೆಗಳನ್ನು ಪರಿಶೀಲಿಸಿತು.

ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಯು.ಜಿ.ಡಿ. ಕಾಮಗಾರಿ ಆರಂಭಗೊಂಡು 6 ವರ್ಷ ಕಳೆದರೂ, ಯೋಜನೆ ಇನ್ನೂ ಪೂರ್ಣಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಮಿತಿಯು, ಇದಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿ ಮುಂದಿನ 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿತು. ಯೋಜನೆ ಜಾರಿಗೊಳಿಸಲು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಿಳಿಸಿತು.

ಕೆ.ಯು.ಐ.ಡಿ.ಎಫ್.ಸಿ. ಅಧಿಕಾರಿಗಳು ಸಭೆಯಲ್ಲಿ ಸಮಿತಿ ಮುಂದೆ ಯೋಜನೆ ವಿಳಂಭದ ಕಾರಣ ವಿವರಿಸಿತು. ಒಳಚರಂಡಿ ಮನೆ ಮನೆ ಸಂಪರ್ಕಕ್ಕೆ ಹೆಚ್ಚುವರಿ 22 ಕೋಟಿ ರೂಪಾಯಿ ಅನುದಾ‌ನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸುರತ್ಕಲ್ ವಲಯದಲ್ಲಿ ಒಳಚರಂಡಿ ಕಾಮಗಾರಿಯಲ್ಲಿ 116 ಕಿ.ಮೀ. ಪೈಪ್ ಲೈನ್ ಹಾಗೂ 824 ಮ್ಯಾನ್ ಹೋಲ್ ಗಳನ್ನು ಮಾಡಲಾಗಿದೆ. ಇಲ್ಲಿನ ಬಹುತೇಕ ಪ್ರದೇಶಗಳಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಸಮಿತಿಗೆ ವಿವರಿಸಿದರು.

ಈ ಎರಡೂ ಒಳಚರಂಡಿ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗಮನಹರಿಸಿ, ಮುಂದಿನ 15 ದಿನಗಳೊಳಗೆ ವರದಿ ನೀಡುವಂತೆ ಸಮಿತಿಯ ಅಧ್ಯಕ್ಷ ಶರವಣ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯು ಮಹಾನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕೆರೆಗಳ ಸಂರಕ್ಷಣೆ, ನೀರು ಮಾಲಿನ್ಯ ದಂತಹ ವಿಷಯಗಳಲ್ಲಿ  ಕಟ್ಟುನಿಟ್ಟಾಗಿ ವ್ಯವಹರಿಸಲು ಸಮಿತಿಯು ಮಂಡಳಿಗೆ ಸೂಚಿಸಿತು. ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಸಮರ್ಥವಾಗಿ ದಾಖಲೆಗಳನ್ನು ಮಂಡಿಸಬೇಕು ಎಂದು ಸೂಚಿಸಿತು. ಮಾಲಿನ್ಯ ಮಂಡಳಿಗೆ ಪ್ರತ್ಯೇಕ ಕಾನೂನು ಕೋಶ ಒದಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದ 3 ಪ್ರಕರಣ ಹಾಗೂ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ 1 ಪ್ರಕರಣವು ರಾಷ್ಟ್ರೀಯ ಹಸಿರು ಪೀಠ(ಎನ್.ಜಿ.ಟಿ)ದ ಮುಂದೆ ಇದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸಮಿತಿಗೆ ವಿವರಿಸಿದರು.

ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಅಗತ್ಯ ಜಾಗ ಒದಗಿಸಲು ಅಧ್ಯಕ್ಷರು ಮಹಾನಗರಪಾಲಿಕೆಗೆ ಸೂಚಿಸಿದರು.

ಸಭೆಯಲ್ಲಿ ವಿಧಾನಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿಯ ಸದಸ್ಯರಾದ ಮಂಜುನಾಥ ಭಂಢಾರಿ, ಪ್ರತಾಪ ಸಿಂಹ ನಾಯಕ್, ಡಿ.ಎಸ್‌. ಅರುಣ್, ಕೆ.ಎಸ್. ನವೀನ್, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮತ್ತಿತರರು ಇದ್ದರು.

ಇದಕ್ಕೂ ಮೊದಲು ಸಮಿತಿಯು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ, ಸರಕಾರಿ ಭರವಸೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಅನುಷ್ಠಾನ ಕುರಿತು ಸಭೆ ನಡೆಸಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article