
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಂಡೂಡುವಂತೆ ಬಿಜೆಪಿ ಆಗ್ರಹ
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಸತೀಶ್ ಕುಂಪಲ, ಯಾವುದೇ ಪೂರ್ವಮಾಹಿತಿ ನೀಡದೆ ಏಕಾಏಕಿ ಮನೆಗಳಿಗೆ ಆಗಮಿಸಿ ಸ್ಟಿಕ್ಕರ್ ಅಂಟಿಸಲಾಗಿದೆ. ಸಮೀಕ್ಷೆಯ ಪತ್ರದಲ್ಲಿ 47 ಹಿಂದು ಉಪಜಾತಿಗಳ ಎದುರು ಕ್ರೈಸ್ತ ಎಂದು ಸೇರಿಸುವ ಮೂಲಕ ಗೊಂದಲ ಸೃಷ್ಟಿಸಲಾಗಿದೆ. ಈ ಬಗ್ಗೆ ಸರ್ಕಾರದ ಕಡೆಯಿಂದ ಸರಿಯಾದ ಸ್ಪಷ್ಟನೆ ದೊರಕಿಲ್ಲ. ಹೀಗಿರುವಾಗ ದಸರಾ ಹಬ್ಬದ ಒಂದು ವಾರದ ಅವಧಿಯಲ್ಲಿ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಮುಕ್ತಾಯಗೊಳಿಸುವಂತೆ ಆತುರದ ತೀರ್ಮಾನವನ್ನು ಸರ್ಕಾರ ಕೈಗೊಂಡಿರುವುದು ಸರಿಯಲ್ಲ. ಆದ್ದರಿಂದ ಹಿಂದು ಉಪ ಜಾತಿಗಳ ಎದುರು ನಮೂದಿಸಿದ ಕ್ರೈಸ್ತ ಹೆಸರನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಸಮೀಕ್ಷೆದಾರರು ಭರ್ತಿಗೊಳಿಸಬೇಕು. ಸಮೀಕ್ಷೆದಾರರು ಮನೆಗೆ ಭೇಟಿ ನೀಡುವಾಗ ಏನೆಲ್ಲ ದಾಖಲೆಗಳನ್ನು ಹಾಜರುಪಡಿಸಬೇಕು ಎಂಬ ಮಾಹಿತಿಯನ್ನು ನೀಡಿಲ್ಲ. ಉಪ ಜಾತಿಗಳ ಬಗೆಗಿನ ಗೊಂದಲ ಬಗೆಹರಿದಿಲ್ಲ. ಇದರಿಂದಾಗಿ ಈಗಾಗಲೇ ಸರ್ಕಾರದ ಫಲಾನುಭವಿಗಳು ಆಗಿರುವವರಿಗೆ ಮೀಸಲಾತಿ ನಮೂದಿನಿಂದ ತೊಂದರೆಯಾಗುವ ಆತಂಕ ಎದುರಾಗಿದೆ. ಮನೆಗಳಿಗೆ ಮೆಸ್ಕಾಂನ ಆರ್‌ಆರ್ ನಂಬರಿನ ಸ್ಟಿಕ್ಕರ್ ಅಂಟಿಸಿದ್ದನ್ನು ಕೆಲವು ಮನೆಗಳಲ್ಲಿ ತೆಗೆದು ಹಾಕಲಾಗಿದೆ. ಹಾಗಾಗಿ ಎಲ್ಲ ಗೊಂದಲಗಳಿಗೆ ತೆರೆ ಎಳೆದ ಬಳಿಕವೇ ಸರ್ಕಾರ ಸಮೀಕ್ಷೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಖಾದರ್ ದ.ಕ. ಉಸ್ತುವಾರಿ ಸಚಿವರೇ?
ದ.ಕ.ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಆಗುಹೋಗುಗಳಿಗೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡುತ್ತಾರೆ. ಅವರು ಸ್ಪೀಕರ್ ಆಗಿ ಮಾತನಾಡುವುದಕ್ಕೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕೂ ವ್ಯತ್ಯಾಸ ಇದೆ. ಜಿಲ್ಲಾ ಉಸ್ತುವಾರಿ ಸಚಿವರ ಪರವಾಗಿ ಸ್ಪೀಕರ್ ಮಾತನಾಡುತ್ತಾರೆ ಎಂದಾದರೆ ಉಸ್ತುವಾರಿ ಸಚಿವರ ಜವಾಬ್ದಾರಿ ಏನು? ಹಾಗಾದರೆ ಖಾದರ್ ಸ್ಪೀಕರ್‌ರೇ ಅಥವಾ ಉಸ್ತುವಾರಿ ಸಚಿವರೇ ಎಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಶ್ನಿಸಿದರು. ಕೆಂಪು ಕಲ್ಲು, ಮರಳು, ಧ್ವನಿವರ್ಧಕ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಉಸ್ತುವಾರಿ ಸಚಿವರ ಬದಲು ಸ್ಪೀಕರ್ ಖಾದರ್ ಅವರೇ ಉತ್ತರಿಸುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ ಎಂದರು.
ಮುಖಂಡರಾದ ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಪೂಜಾ ಪೈ, ಸಂಜಯ ಪ್ರಭು, ಮೋಹನರಾವ್ ಮತ್ತಿತರರು ಇದ್ದರು.