
ಕೆಂಪು ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಬಿಜೆಪಿಯ ರಾಜಕೀಯ ನಟನೆ ಮಾಡುತ್ತಿದೆ: ಹರೀಶ್ ಕುಮಾರ್
ಅವರು ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಕಳೆದ ನಾಲ್ಕು ತಿಂಗಳಿನಿಂದ ಕರಾವಳಿಯಲ್ಲಿ ಕೆಂಪು ಕಲ್ಲು ಮತ್ತು ಮರಳು ಬಾರಿ ಸದ್ದು ಮಾಡುತ್ತಿದ್ದು, ಇದಕ್ಕೆ ಪರಿಹಾರ ಸಿಕ್ಕಿದೆ. ಈ ಹಿಂದೆ ಕೇವಲ 5 ಮಂದಿಗೆ ಇದ್ದ ಪರ್ಮೀಟ್ ಈಗ 25 ಮಂದಿಗೆ ನೀಡಲಾಗಿದೆ. 53 ಅರ್ಜಿಗಳು ಬಂದಿದ್ದು, 25 ಮಂದಿಗೆ ಪರ್ಮೀಟ್ ನೀಡಿದ್ದು, ಉಳಿದವರಿಗೆ ಹಂತ ಹಂತವಾಗಿ ಪರ್ಮೀಟ್ ನೀಡಲಾಗುವುದು ಎಂದರು.
ಇಲ್ಲಿಯ ತನಕ ಸಂಘಟನೆಯವರು ಯಾರೂ ಪ್ರತಿಭಟನೆ ಮಾಡಿಲ್ಲ. ಕೇವಲ ಬಿಜೆಪಿಯವರು ಮಾತ್ರ ಪ್ರತಿಭಟನೆ ಡೊಂಬರಾಟ ಮಾಡುತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿರುವುದು ಗೊತ್ತಾದರೂ ಪ್ರತಿಭಟನೆ ನಾಟಕ ಮಾಡುತ್ತಿದ್ದಾರೆ. ಇಲ್ಲಿಯ ಜನತೆಗೆ ಶೇ.25 ರಷ್ಟು ಮಾತ್ರ ನಾನ್ ಸಿಆರ್‌ಝೆಡ್ ಮರಳನ್ನು ಜನರು ಬಳಸುತ್ತಿದ್ದು, ಶೇ.75 ರಷ್ಟು ಸಿಆರ್‌ಝೆಡ್ ಮರಳನ್ನು ಜನರು ಬಳಸುತ್ತಾರೆ. ಜನರ ಬೇಡಿಕೆಗೆ ಅನುಗುಣವಾಗಿ ಮರಳು ನೀತಿಯನ್ನು ಸರಳಗೊಳಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿಯವರು ತಿಂಗಳಿಗೊಮ್ಮೆ ಬರುವ ಉಸ್ತುವಾರಿ ಸಚಿವರು ಎಂದು ಹೇಳುತ್ತಾರೆ. ಅವರು ತಿಂಗಳಿಗೆ 2-3 ಬಾರಿ ಬರುತ್ತಾರೆ. ಬಂದಾಗ ಜನರ ಅಹವಾಲು ಆಲಿಸುತ್ತಾರೆ. ಇಲ್ಲಿಯ ತನಕ ಯಾವ ಶಾಸಕರುಗಳು ಉಸ್ತುವಾರಿ ಸಚಿವರಲ್ಲಿ ಹೋಗಿ ಇಂತಹ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಮೊದಲು ಅವರ ಜವಾಬ್ದಾರಿಯನ್ನು ಸರಿಯಾಗಿ ನಿಬಾಯಿಸಲಿ ಎಂದು ಸಲಹೆ ನೀಡಿದರು.
ಆಸ್ಕರ್ ಫೆರ್ನಾಡಿಸ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಮಂಗಳೂರಿನಿಂದ ಬೊಮ್ಮನಹಳ್ಳಿಯ ವರೆಗೆ ರಸ್ತೆ ಅಭಿವೃದ್ಧಿ ಮಾಡಿದರು. ಅಲ್ಲಿಂದ ಸಕಲೇಶಪುರಕ್ಕೆ 10 ಕಿ.ಮೀ. ಇರುವುದು ಅದಾದ ಮೇಲೆ ಮೋದಿ ಮೂರು ಬಾರಿ ಪ್ರಧಾನಮಂತ್ರಿಯಾದರು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಳಿನ್ ಕುಮಾರ್ ಕಟೀಲ್ ಮೂರು ಬಾರಿ ಸಂಸದರಾದರು ಈಗ ಕ್ಯಾಪ್ಟನ್ ಸಾಹೇಬರು ಇದ್ದಾರೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಸಂಸದರು ರಸ್ತೆ, ಚರಂಡಿ ಬಗ್ಗೆ ಮಾತನಾಡುವುದನ್ನು ಬಿಡಿ ಧರ್ಮ, ಹಿಂದುತ್ವ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳುವವರು ಇನ್ನು ಅಭಿವೃದ್ಧಿಯ ಬಗ್ಗೆ ಇವರುಗಳು ಏನು ಮಾಡಲು ಸಾಧ್ಯ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಬಿಜೆಪಿಯವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಭೆಯಲ್ಲಿ ಇದ್ದು, ವಿಷಯ ತಿಳಿದು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಪ್ರತಿಭಟನೆಯಲ್ಲಿ ಸೋತ ಅಭ್ಯರ್ಥಿಗಳ ಲೆಟರ್‌ರೆಟ್‌ನಲ್ಲಿ ಅನುದಾನ ತರುತ್ತಾರೆ ಎಂದು ಹೇಳುತ್ತಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅವಕಾಶ ಸಿಕ್ಕಾಗ ಜನರ ಸೇವೆ ಮಾಡಬೇಕು. ಯಾರ ಲೆಟರೇಟ್‌ನಲ್ಲಿ ಅನುದಾನ ಬರಲಿ ಅಭಿವೃದ್ಧಿಯಾಗುತ್ತದಲ್ಲ. ಅದು ಸಾಕು. ನೀವು ಅಭಿವೃದ್ಧಿ ಕೆಲಸ ಮಾಡಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದರು.
ಜಾತಿ ಜನ ಗಣತಿ ಸಾಮಾಜಿಕ ನ್ಯಾಯದ ಉದ್ದೇಶದಿಂದ ಸರಕಾರ ಹಮ್ಮಿಕೊಂಡಿದೆ. ಈ ಬಗ್ಗೆ ಬಿಜೆಪಿ ಅಪಸ್ವರ ಎತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿಯ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಶಶಿಧರ ಹೆಗ್ಡೆ, ಪದ್ಮರಾಜ್, ಮುಹಮ್ಮದ್ ಮೋನು, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ ಮೊದಲಾದವರು ಉಪಸ್ಥಿತರಿದ್ದರು.